ಅಂಬೇಡ್ಕರ್ ಸ್ಫೂರ್ತಿಸೌಧಕ್ಕೆ ಅನುಮೋದನೆ: ಕಾನೂನು ಸಚಿವ ಜಯಚಂದ್ರ
ಬೆಂಗಳೂರು, ಜ. 26: ಸಮಾಜ ಕಲ್ಯಾಣ ಸಚಿವಾಲಯದ ವ್ಯಾಪ್ತಿಯಡಿ ಬರುವ ವಿವಿಧ ಕೇಂದ್ರ ಕಚೇರಿಗಳ ಸಂಕೀರ್ಣವನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ‘ಡಾ.ಬಿ.ಆರ್.ಅಂಬೇಡ್ಕರ್ ಸ್ಫೂರ್ತಿ ಸೌಧ’ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇಲ್ಲಿನ ಸಂಪಂಗಿ ರಾಮನಗರದಲ್ಲಿ 23.35 ಕೋಟಿ ರೂ.ವೆಚ್ಚದಲ್ಲಿ ಸ್ಫೂರ್ತಿ ಸೌಧ ನಿರ್ಮಿಸಲು ಒಪ್ಪಿಗೆ ನೀಡಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿ, ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿಗಳ ಆಯೋಗ, ತಾಂಡಾ ಅಭಿವೃದ್ಧಿ ನಿಗಮ ಒಳಗೊಂಡಂತೆ ಸಮಾಜ ಕಲ್ಯಾಣ ಸಚಿವಾಲಯದ ವ್ಯಾಪ್ತಿಯ ಹನ್ನೊಂದು ವಿವಿಧ ಕೇಂದ್ರ ಕಚೇರಿಗಳ ಸಂಕೀರ್ಣವನ್ನು ಒಂದೆ ಸೂರಿನಡಿ ತರಲಾಗುವುದು ಎಂದು ಅವರು ಹೇಳಿದರು.
ಮೀನುಗಾರರಿಗೆ ಮನೆ: ‘ಪ್ರಸಕ್ತ ಸಾಲಿನಲ್ಲಿ ಮತ್ಸಾಶ್ರಯ ಯೋಜನೆಯಡಿ ವಸತಿ-ರಹಿತ ಮೀನುಗಾರರಿಗೆ 3 ಸಾವಿರ ಮನೆಗಳನ್ನು 40.16ಕೋಟಿ ರೂಪಾಯಿ ವೆಚ್ಚದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಿರ್ಮಿಸಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ’
-ಟಿ.ಬಿ.ಜಯಚಂದ್ರ ಕಾನೂನು ಸಚಿವ