×
Ad

ದೇಶಾದ್ಯಂತ ಕೋಮುವಾದದ ಕಾರಾಗೃಹಗಳ ನಿರ್ಮಾಣ: ಬರಗೂರು ರಾಮಚಂದ್ರಪ್ಪ ಆತಂಕ

Update: 2017-07-26 18:56 IST

ಬೆಂಗಳೂರು, ಜು.26: ಲೋಕಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗಲೇ ಕೋಮುವಾದಿಗಳು ದೇಶಾದ್ಯಂತ ಕೋಮುವಾದದ ಕಾರಾಗೃಹಗಳನ್ನು ನಿರ್ಮಿಸಲು ನಿರತವಾಗಿದ್ದಾರೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಅಖಿಲ ಭಾರತ ಯುವಜನ ಫೆಡರೇಷನ್ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ದೇಶವನ್ನು ಉಳಿಸೋಣ-ದೇಶವನ್ನು ಬೆಳಸೋಣ’ ಕುರಿತು ಜಾಗೃತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಲಕ್ಷಾಂತರ ಉದ್ಯೋಗಗಳನ್ನು ನಿರ್ಮಿಸುತ್ತೇವೆ ಎಂದು ಆಶ್ವಾಸನೆ ನೀಡಲಾಗಿತ್ತು. ಆದರೆ, ಇಲ್ಲಿಯವರೆಗೂ ಕನಿಷ್ಠ ಮೂರು ಲಕ್ಷ ಉದ್ಯೋಗಗಳು ನಿರ್ಮಾಣವಾಗಿಲ್ಲ. ಹಾಗೆಯೇ ಬಡವರ ಬ್ಯಾಂಕ್ ಖಾತೆಗೆ 15ಲಕ್ಷ ರೂ. ಹಾಕಲಾಗಿಲ್ಲ. ಬಿಜೆಪಿ ಕೊಟ್ಟ ಭರವಸೆಗಳೆಲ್ಲ ಹುಸಿಯಾಗಿದೆ ಎಂದು ಅವರು ಕಿಡಿಕಾರಿದರು.

ಇಷ್ಟಾದರೂ ಜನರ ಮಧ್ಯೆ ಕೋಮುವಾದದ ಬೀಜ ಬಿತ್ತಿ, ಅದರ ಮೂಲಕ ಚುನಾವಣೆ ಪ್ರಚಾರಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೋಮುವಾದಿಗಳು ದೇಶಾದ್ಯಂತ ಕೋಮುವಾದವನ್ನು ಸೃಷ್ಟಿಸಲು ಬೇಕಾದ ಕಾರಾಗೃಹಗಳನ್ನು ನಿರ್ಮಿಸಲು ಈಗಿನಿಂದಲೇ ನಿರತರಾಗಿದ್ದಾರೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಎಡಪಕ್ಷಗಳನ್ನು ಹೊರತು ಪಡಿಸಿದರೆ ಉಳಿದ ಪಕ್ಷಗಳು ರಾಜಕೀಯವನ್ನು ಕೇವಲ ಚುನಾವಣೆಗೆ ಮಾತ್ರ ಸೀಮಿತಗೊಳಿಸಿವೆ. ದೇಶದಲ್ಲಾಗುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಯ ಕುರಿತು ಕಿಂಚಿತ್ತೂ ಕಾಳಜಿ ಇಲ್ಲವಾಗಿದೆ. ಹೀಗಾಗಿಯೇ ದೇಶದ ಆರ್ಥಿಕ ಕ್ಷೇತ್ರವನ್ನು ಕಾರ್ಪೊರೇಟ್ ಶಕ್ತಿಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರಕ್ಕೆ ದೇಶದ ಅಭಿವೃದ್ಧಿಯೆಂದರೆ ಕೇವಲ ಕಾರ್ಪೊರೇಟ್ ಸಂಸ್ಥೆಗಳ ಅಭಿವೃದ್ಧಿಯಾಗಿದೆ. ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿಲ್ಲ. ಕೇವಲ ಜಾತಿ, ಧರ್ಮಗಳ ಹೆಸರಿನಲ್ಲಿ ವಾಗ್ವಾದಗಳ ಮೂಲಕ ದೇಶದಲ್ಲಿ ನಿಜವಾಗಿ ಕಾಡುತ್ತಿರುವ ಸಮಸ್ಯೆಗಳನ್ನು ಮರೆ ಮಾಚಲಾಗುತ್ತಿದೆ ಎಂದು ಅವರು ವಿಷಾದಿಸಿದರು.

ಏಕ ಸಂಸ್ಕೃತಿಯನ್ನು ಪ್ರತಿಪಾದಿಸುವ ಕೋಮುವಾದಿಗಳು ಒಗ್ಗಟ್ಟಾಗಿದ್ದಾರೆ. ಆದರೆ, ಬಹುತ್ವವನ್ನು ಕಾಪಾಡುವ, ಜನಪರ ಆಶಯಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿರುವ ಪ್ರಗತಿಪರ ಸಂಘಟನೆಗಳು ವಿಭಾಗಗಳಾಗಿರುವುದರಿಂದ ಕೋಮುವಾದಿಗಳಿಗೆ ಜಯವಾಗುತ್ತಿದೆ. ಈ ಕುರಿತು ಜನಪರ ಸಂಘಟನೆಗಳ ನಾಯಕರು ಗಂಭೀರವಾಗಿ ಚಿಂತಿಸಿ ಒಕ್ಕೂಟ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಜನಪರ ಸಂಘಟನೆಗಳು ತಮ್ಮ ಮೂಲ ಸಿದ್ಧಾಂತಕ್ಕೆ ಸೃಜನಶೀಲತೆಯ ಆಯಾಮ ಕೊಡಬೇಕಾಗಿದೆ. ಆಗ ಮಾತ್ರ ಚಲನಶೀಲತೆಯನ್ನು ಪಡೆದುಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪ್ರಗತಿಪರ ಚಿಂತಕ ಜಿ.ರಾಮಕೃಷ್ಣ, ಎಐವೈಎಫ್ ರಾಜ್ಯ ಸಂಚಾಲಕ ಎಚ್.ಎಂ.ಸಂತೋಷ, ಎಐಎಸ್‌ಎಫ್ ರಾಜ್ಯಾಧ್ಯಕ್ಷೆ ಜ್ಯೋತಿ.ಕೆ, ಹೊಸತು ಮಾಸ ಪತ್ರಿಕೆಯ ಸಂಪಾದಕ ಡಾ.ಸಿದ್ದನಗೌಡ ಪಾಟೀಲ್, ಎಐವೈಎಫ್ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಅಫ್ತಬ್ ಆಲಂ ಖಾನ್, ಎಐಎಸ್‌ಎಫ್ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಸೈಯದ್ ವಲಿವುಲ್ಲಾ ಖಾದ್ರಿ ಮತ್ತಿತರರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News