ಸಿಎಂರಿಂದ ಮಾಜಿ ಸೈನಿಕರ ಕಡೆಗಣನೆ: ಆರೋಪ
ಬೆಂಗಳೂರು, ಜು. 26: ಕಾರ್ಗಿಲ್ ವಿಜಯ್ ದಿವಸ್ ಆಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಮಸ್ಯೆ ಮತ್ತು ಅಹವಾಲು ಆಲಿಸದೆ ತಮ್ಮನ್ನು ಕಡೆಗಣಿಸಿದರು ಎಂದು ಮಾಜಿ ಸೈನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ರಾಷ್ಟ್ರೀಯ ಸೈನಿಕ ಸ್ಮಾರಕ ಆವರಣದಲ್ಲಿ ರಾಷ್ಟ್ರೀಯ ಸೈನಿಕರ ಮ್ಯಾನೇಜ್‌ಮೆಂಟ್ ಟ್ರಸ್ಟ್ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮುಖ್ಯಮಂತ್ರಿಗಳು ವಾಪಸ್ಸಾದ ಬಳಿಕ ವಿಧಾನ ಪರಿಷತ್ತಿನ ಸದಸ್ಯ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ ಬಳಿ ಕೆಲ ಮಾಜಿ ಯೋಧರು ಈ ಕುರಿತು ಬೇಸರ ವ್ಯಕ್ತಪಡಿಸಿದರು.
ಮಾಜಿ ಸೈನಿಕರಿಗೆ ಉಚಿತ ಪಾಸ್ ಮತ್ತು ಇತರೆ ಕುಂದು ಕೊರತೆಗಳ ಕುರಿತು ಮುಖ್ಯಮಂತ್ರಿಗಳ ಬಳಿ ಕೇಳಬೇಕಿತ್ತು. ಆದರೆ ಇದ್ಯಾವುದಕ್ಕೂ ಅವರ ಅಂಗ ರಕ್ಷಕರು ಅವಕಾಶಕೊಡಲಿಲ್ಲ. ಸೌಜನ್ಯಕ್ಕಾದರೂ ಸ್ವತಃ ಮುಖ್ಯಮಂತ್ರಿಗಳು ಮಾಜಿ ಯೋಧರ ಸಮಸ್ಯೆ ಅಹವಾಲುಗಳನ್ನು ವಿಚಾರಿಸಬೇಕಿತ್ತು ಎಂದು ಹೊಸಪೇಟೆಯ ಮಾಜಿ ಸೈನಿಕ ಪೆರಿಸ್ವಾಮಿ ರೆಡ್ಡಿ ಹೇಳಿದರು.
ಹಲವು ವರ್ಷಗಳಿಂದ ನಮ್ಮ ಬೇಡಿಕೆಗಳು ಈಡೇರಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲು ಮಡಿಕೇರಿಯಿಂದ ಬೆಳಗ್ಗೆಯೇ ನಗರಕ್ಕೆ ಬಂದಿದ್ದೇವೆ. ಆದರೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಅವಕಾಶ ಸಿಗಲಿಲ್ಲ. ಮುಖ್ಯಮಂತ್ರಿಗಳು ಸ್ವತಃ ಮುಂದೆ ಬಂದು ಮಾಜಿ ಸೈನಿಕರ ಸಮಸ್ಯೆಗಳನ್ನು ಆಲಿಸಬೇಕಿತ್ತು ಎಂದು ಮಡಿಕೇರಿಯ ಕೊಟ್ಟಂಗಳ ಜಪ್ಪು ‘ವಾರ್ತಾಭಾರತಿ’ಗೆ ತಿಳಿಸಿದರು.
ನಮ್ಮ ಸಮಸ್ಯೆ, ಕುಂದು ಕೊರತೆಗಳನ್ನು ಸಲ್ಲಿಸಲು ಆಯೋಜಿಸಿರುವ ದರ್ಬಾರ್ ಸಭೆ ಇದಲ್ಲ. ಇದು ಹುತ್ಮಾತ ಯೋಧರರಿಗೆ ಶ್ರದ್ಧಾಂಜಲಿ, ಗೌರವ ಸಲ್ಲಿಸುವ ಕಾರ್ಯಕ್ರಮ. ಅಹವಾಲು ಸಲ್ಲಿಸಲು ವರ್ಷ ಪೂರ್ತಿ ಸಮಯವಿದೆ ಎಂದು ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಹೇಳಿದರು.
ಇದು ನಮ್ಮ ಎಲ್ಲರ ಕಾರ್ಯಕ್ರಮ. ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರನ್ನು ಸ್ಮರಿಸುವಂತ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನ ನೀಡಬೇಕಿಲ್ಲ. ಆದರೆ ಕೆಲವರು ಆಹ್ವಾನ ನೀಡಿಲ್ಲ ಎಂದು ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟಿರುವುದು ತರವಲ್ಲ ಎಂದು ತಿಳಿಸಿದರು.
ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಿಕೊಳ್ಳಲು ತುಂಬಾ ದಿನದಿಂದ ಬಿಡುವು ಮಾಡಿಕೊಂಡು ನಗರಕ್ಕೆ ಬಂದಿರುವ ಮಾಜಿ ಸೈನಿಕರನ್ನು ಮಾತನಾಡಿಸಬೇಕಿತ್ತು ಎಂದು ಹುತ್ಮಾತ ಯೋಧ ಸಂದೀಪ್ ಉನ್ನಿಕೃಷ್ಣ ನ್‌ಅವರ ತಂದೆ ಕೆ. ಉನ್ನಿಕೃಷ್ಣನ್ ಹೇಳಿದರು.