×
Ad

ಕಾರ್ಗಿಲ್ ಯುದ್ಧದಲ್ಲಿ ಮಡಿದವರು ಸ್ಫೂರ್ತಿಯಾಗಲಿ: ಸಿಎಂ

Update: 2017-07-26 19:04 IST

ಬೆಂಗಳೂರು, ಜು. 26: ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರ ತ್ಯಾಗ, ಬಲಿದಾನ ಪ್ರತಿಯೊಬ್ಬರಲ್ಲಿ ದೇಶ ಪ್ರೇಮ ಹುಟ್ಟಲು ಸ್ಫೂರ್ತಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಬುಧವಾರ ನಗರದ ಇಂದಿರಾಗಾಂಧಿ ಉದ್ಯಾನವನದಲ್ಲಿರುವ ಸೈನಿಕರ ಸ್ಮಾರಕ್ಕಕೆ ಗೌರವ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರ ತ್ಯಾಗ, ಬಲಿದಾನ ಪ್ರತಿಯೊಬ್ಬರಲ್ಲೂ ದೇಶಭಕ್ತಿ ಮೂಡಲು ಪ್ರೇರಣೆಯಾಗುತ್ತದೆ ಎಂದರು.

ಕಾರ್ಗಿಲ್ ಯುದ್ಧದಲ್ಲಿ ದೇಶದ 520 ಸೈನಿಕರು ವೀರ ಮರಣ ಹೊಂದಿದ್ದಾರೆ. 1,200ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ರಾಜ್ಯದ 16 ಮಂದಿ ಸೈನಿಕರು ಸೇರಿದ್ದಾರೆ. ಇವರ ತ್ಯಾಗ, ಬಲಿದಾನದಿಂದ ದೇಶ ಪಾಕ್ ಸೈನಿಕರ ವಶವಾಗಿದ್ದ ಕಾರ್ಗಿಲ್ ಪ್ರದೇಶವನ್ನು ಮರಳಿ ವಶಕ್ಕೆ ಪಡೆಯಲಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ವಿಧಾನ ಪರಿಷತ್ ಸಭಾಪತಿ ಡಿ.ಹೆಚ್ ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಹಾಗೂ ಸೇನೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ:  ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣ ತನಿಖೆಯ ಹಂತದಲ್ಲಿದೆ. ತನಿಖೆಯ ವರದಿ ಕೈ ಸೇರಿದ ಬಳಿಕ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News