ಜು.30 ರಂದು ರಾಜ್ಯಮಟ್ಟದ ಸಮಾವೇಶ
ಬೆಂಗಳೂರು, ಜು.26: ಬುದ್ಧ, ಬಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯಮಟ್ಟದ ಸಮಾವೇಶವನ್ನು ಜು.30 ರಂದು ಬಾಗಲಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ ನಾಗವಾರ, ದೇಶದಲ್ಲಿ ದಲಿತರ ಹೆಸರು ಬಳಸಿಕೊಂಡು ದಲಿತರನ್ನು ಶೋಷಣೆಯ ಕೂಪಕ್ಕೆ ತಳ್ಳುವ ವ್ಯವಸ್ಥಿತವಾದ ಹುನ್ನಾರ ನಡೆಯುತ್ತಿದೆ. ಮತ್ತೊಂದು ಕಡೆಯಲ್ಲಿ ಮನುವಾದಿಗಳು ಅಂಬೇಡ್ಕರ್‌ರನ್ನು ಹೈಜಾಕ್ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ದಲಿತ ಸಮುದಾಯವನ್ನು ಜಾಗೃತಿಗೊಳಿಸಲು ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದರು.
ಬುದ್ಧ, ಬಸವ, ಅಂಬೇಡ್ಕರ್‌ರ ತತ್ವದಡಿ ನಡೆಯಬೇಕು ಹಾಗೂ ಸಮಾಜದಲ್ಲಿ ಎಲ್ಲರಿಗೂ ಸಮಾನ ಗೌರವ ಸಿಗಬೇಕು. ಅಂತರ್‌ಜಾತಿ ವಿವಾಹಿತರಿಗೆ ರಾಜ್ಯ ಸರಕಾರ ಪ್ರೋತ್ಸಾಹ ಧನ ನೀಡುತ್ತಿರುವುದನ್ನ ಹೆಚ್ಚಿಸಬೇಕು. ಹಾಗೂ ಎಸ್ಸಿ-ಎಸ್ಟಿ ಉಪಜಾತಿಗಳ ಅಂತರ್‌ಜಾತಿ ವಿವಾಹಿತರಿಗೂ ಪ್ರೋತ್ಸಾಹ ನೀಡಬೇಕು ಎಂದು ಈ ಸಮಾವೇಶದ ಮೂಲಕ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಮಾವೇಶವನ್ನು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಶಾಸಕ ರಾಜು ಅಲಗೂರು, ಶಿವಾನಂದ ಪಾಟೀಲ, ಎಚ್.ವೈ.ಮೇಟಿ, ಪತ್ರಕರ್ತ ರಾಮ್ ಮನಗೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್, ಮಾಜಿ ಸಚಿವ ಆರ್.ಬಿ.ತಿಮ್ಮಪೂರ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.