ಐಟಿ ನೌಕರರ ವಜಾ ಖಂಡಿಸಿ ಜು.29ರಂದು ಪ್ರತಿಭಟನೆ
ಬೆಂಗಳೂರು, ಜು.26: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕುತ್ತಿರುವುದನ್ನು ಖಂಡಿಸಿ ಮಾಹಿತಿ ತಂತ್ರಜ್ಞಾನ ನೌಕರರ ಸಂಘದ ವತಿಯಿಂದ ಜು.29 ರಂದು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡ ಕುಮಾರಸ್ವಾಮಿ, ಯಾವುದೇ ಮಾಹಿತಿ ನೀಡದೆ, ಕಾರ್ಮಿಕ ಕಾಯ್ದೆಗೆ ವಿರುದ್ಧವಾಗಿ ಐಟಿ ಕಂಪೆನಿಗಳು ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕುತ್ತಿವೆ. ಇದರಿಂದಾಗಿ ಲಕ್ಷಾಂತರ ನೌಕರರು ಬೀದಿಗೆ ಬರುವಂತಾಗಿದೆ ಎಂದು ಹೇಳಿದರು. ಈಗಾಗಲೇ ಹಲವಾರು ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಲ್ಲದೆ, ಈಗ ದೂರವಾಣಿ ಮುಖಾಂತರ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಆಡಳಿತ ಮಂಡಳಿಗಳು ಒತ್ತಡ ಹೇರುತ್ತಿವೆ. ಉದ್ದೇಶಪೂರ್ವಕವಾಗಿ ಕಂಪೆನಿಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ರಕ್ಷಣೆ ನೀಡುತ್ತಿಲ್ಲ. ಕಾರ್ಮಿಕ ಕಾಯ್ದೆ ಪ್ರಕಾರ ಲೈಂಗಿಕ ಕಿರುಕುಳ ಪ್ರಕರಣಗಳು ಕಂಡು ಬಂದರೆ ಕ್ರಮ ಕೈಗೊಳ್ಳಬೇಕು. ಆದರೆ, ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಐಟಿ ಕ್ಷೇತ್ರದಲ್ಲಿ ನೂತನವಾಗಿ ಕೆಲಸಕ್ಕೆ ಬರುತ್ತಿರುವ ನೌಕರರು ಒಂದು ಅಥವಾ ಎರಡು ವರ್ಷ ಕೆಲಸ ಮಾಡಬಹುದು, ಅನಂತರ ಯಾವುದೇ ಸಮಯದಲ್ಲಾದರೂ ಕೆಲಸದಿಂದ ತೆಗೆಯಬಹುದು ಎಂಬ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ನೂತನ ನೌಕರರು ಆತಂಕದಿಂದ ಉದ್ಯೋಗ ಪಡೆದುಕೊಳ್ಳುವಂತಾಗಿದೆ ಎಂದು ತಿಳಿಸಿದರು.
ಹೀಗಾಗಿ, ಕೂಡಲೇ ನೌಕರರನ್ನು ಕೆಲಸದಿಂದ ತೆಗೆಯುವುದನ್ನು ತಪ್ಪಿಸಲು ಕಾರ್ಮಿಕ ಸಚಿವ ಹಾಗೂ ಕಾರ್ಮಿಕ ಇಲಾಖೆ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು. 1946 ರ ಕೈಗಾರಿಕಾ ನೌಕರರ ನೀತಿ ಕಾಯ್ದೆ ರದ್ದು ಪಡಿಸಬೇಕು. ಈಗಾಗಲೇ ವಜಾ ಮಾಡಿರುವ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಅನಗತ್ಯವಾಗಿ ನೌಕರರನ್ನು ಕೆಲಸದಿಂದ ವಜಾ ಮಾಡುವುದನ್ನು ನಿಲ್ಲಿಸುವಂತೆ ಸಚಿವರು ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದರು.