ಸಾಮಾನ್ಯ ವಲಯಗಳ ನಿಯಂತ್ರಣಕ್ಕೆ ಮಾರ್ಪಾಡು: ಆಮ್‌ಆದ್ಮಿ ಖಂಡನೆ
ಬೆಂಗಳೂರು, ಜು.26: ಸಾಮಾನ್ಯ ವಲಯಗಳ ನಿಯಂತ್ರಣಕ್ಕೆ ಹೊಸದಾಗಿ ಮಾರ್ಪಾಡುಗಳನ್ನು ತರಲು ಉದ್ದೇಶಿಸಿರುವ ನಗರಾಭಿವೃದ್ಧಿ ಇಲಾಖೆಯ ನಡೆಯನ್ನು ಆಮ್‌ಆದ್ಮಿ ಪಕ್ಷ ಖಂಡಿಸುತ್ತದೆ ಎಂದು ಪಕ್ಷದ ಸಂಚಾಲಕಿ ಶಾಂತಾಲಾ ದಾಮ್ಲೆ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಹಾಗೂ ಹೈಕೋರ್ಟ್‌ನ ಆದೇಶ ಉಲ್ಲಂಘನೆ ಮಾಡಿ ಸಾಮಾನ್ಯ ವಲಯಗಳ ನಿಯಂತ್ರಣಕ್ಕೆ ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ. ಇಂತಹ ನಿಯಂತ್ರಣಗಳಿಂದ ಸಾರ್ವಜನಿಕರ ಬದುಕಿನ ವೆುೀಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಈಗಾಗಲೇ ಬಿಡಿಎ ಮತ್ತು ಯುಡಿಡಿ ಸ್ಥಳೀಯ ವಾಸ ಸ್ಥಳಗಳನ್ನು ವಾಣಿಜ್ಯೀಕರಣ ಮಾಡುವ ಅಫಿಡೆವಿಟ್‌ಗಳ ಕಡತವನ್ನು ಸಲ್ಲಿಸಿದ್ದಾರೆ. ಸಂವಿಧಾನದ ಪ್ರಕಾರ ಯಾವುದೇ ಯೋಜನೆಯನ್ನು ರೂಪಿಸುವಾಗ ಸಾರ್ವಜನಿಕರನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದೆ. ಆದರೆ, ಈ ಮಾರ್ಪಾಡುಗಳನ್ನು ತರುವ ವೇಳೆ ಯಾವುದೇ ಸಾರ್ವಜನಿಕ ಸಂಘ-ಸಂಸ್ಥೆಗಳನ್ನು, ಸ್ಥಳೀಯರನ್ನು ಪರಿಗಣಿಸಿಲ್ಲ ಎಂದು ದೂರಿದರು. ಮುಂದಿನ 2035ರ ಅವಧಿಗೆ ಮಾಸ್ಟರ್ ಪ್ಲಾನ್ ತಯಾರಿಸುತ್ತಿದ್ದು, ಇದರಲ್ಲಿ ಒಂದು ವಲಯದ ನಿಯಂತ್ರಣ ಯೋಜನೆಯನ್ನು ಎಲ್ಲ ನಗರಗಳಿಗೆ ಅನ್ವಯ ಮಾಡುತ್ತಿರುವುದು ಯೋಜನೆಯ ಪರಿಕಲ್ಪನೆಯನ್ನು ಅಣಕಿಸಿದಂತಿದೆ. ತಳ ಸಮುದಾಯಗಳು ವಾಸಿಸುವ 29 ಫೀಟ್‌ಗೂ ಕಡಿಮೆ ಅಗಲದ ರಸ್ತೆಗಳಲ್ಲಿರುವ ಪ್ರದೇಶದಲ್ಲಿ ಈ ಯೋಜನೆ ಅನ್ವಯ ಯಾವುದೇ ವ್ಯಾಪಾರ ಮಾಡುವಂತಿಲ್ಲ ಎಂದು ಹೇಳಿದೆ. ಈ ಮೂಲಕ ಬಡವರ ಬದುಕಿನ ವೆುೀಲೆ ಬರೆ ಎಳೆಯಲು ಮುಂದಾಗಿದ್ದು, ಸಂಪೂರ್ಣ ಬಡವರ ವಿರೋಧಿ ನೀತಿ ಜಾರಿ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಡಿಎ ಮತ್ತು ಯುಡಿಡಿ ಈಗಾಗಲೇ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವುದನ್ನು ಖಚಿತಪಡಿಸಬೇಕು. ಕೂಡಲೇ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಬೇಕು. ದೀರ್ಘಕಾಲೀನ ಸಮಗ್ರ ಮಾಸ್ಟರ್ ಯೋಜನೆ ಎಂಪಿಸಿ ತಯಾರಿಸಬೇಕು ಮತ್ತು ಮುಂದಿನ 25 ವರ್ಷಗಳಲ್ಲಿ ಯೋಜಿತ ಬೆಳವಣಿಗೆಯನ್ನು ಮುಂದಿಟ್ಟುಕೊಂಡು ಕೆಲಸ ಮಾಡಬೇಕು. ಮಾಸ್ಟರ್ ಪ್ಲಾನ್ ರಚಿಸುವ ವೇಳೆ ಸ್ಥಳೀಯ ಸಮುದಾಯ ಪಾಲ್ಗೊಳ್ಳುವಿಕೆಯನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.