ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರಿಗೆ ವಂಚನೆ
ಬೆಂಗಳೂರು, ಜು.26: ಕಾಲೇಜಿನ ಕ್ಯಾಂಪಸ್‌ನಲ್ಲಿ ಆಯ್ಕೆ ಮಾಡಿ ಕೆಲಸ ಕೊಡಿಸುವ ನೆಪದಲ್ಲಿ ಅಮಾಯಕ ಯುವತಿಯರನ್ನು ನಗರಕ್ಕೆ ಕರೆತಂದು ಮೋಸ ಮಾಡಿರುವ ಪ್ರಕರಣ ಕೆಆರ್‌ಪುರ ವಿವೇಕ ಲೇಔಟ್‌ನಲ್ಲಿ ನಡೆದಿದ್ದು, ಗಣೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಫ್ಟ್‌ವೇರ್ ಕಂಪೆನಿ ಹೆಸರು ಹೇಳಿಕೊಂಡು ಮಡಿಕೇರಿಯ ಜನರಲ್ ಕಾರ್ಯಪ್ಪಕಾಲೇಜಿನಲ್ಲಿ ವ್ಯಾಸಂಗ ಮಾಡಿದ 40 ಮಂದಿ ಯುವತಿಯರನ್ನು ಕೆಲಸಕ್ಕೆಂದು ಆಯ್ಕೆ ಮಾಡಿದ ಆರೋಪಿಯು, ಆಯ್ಕೆಯಾದ ಯುವತಿಯರಿಗೆ ಬೆಂಗಳೂರಿಗೆ ಬರಲು ಹೇಳಿ ನಕಲಿ ಉದ್ಯೋಗ ಆಹ್ವಾನ ಪತ್ರವನ್ನು ನೀಡಿದ್ದ ಎನ್ನಲಾಗಿದೆ.
ಯುವತಿಯರಿಗೆ ಪಿಜಿ ಮಾಡಿಕೊಡಲಾಗಿದ್ದು ಇದಕ್ಕಾಗಿ ಹಣವನ್ನು ಸಹ ಪಡೆದಿದ್ದಾನೆ. ಕಂಪೆನಿಯ ಕೆಲಸಕ್ಕೆ ಸೇರುವ ಮುನ್ನ ಆರೋಗ್ಯ ತಪಾಸಣೆ ಮಾಡಿಸಬೇಕೆಂದು ಹೇಳಿದ್ದಾರೆ. ಇದಕ್ಕಾಗಿ ಮುಂಜಾನೆ ಆಹಾರ ಸೇವಿಸಬೇಡಿ ಇಡೀ ದೇಹದ ತಪಾಸಣೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಯುವತಿಯರು ನಕಲಿ ಉದ್ಯೋಗ ಅಹ್ವಾನ ಪತ್ರವನ್ನು ಪಡೆದ ಕಂಪೆನಿ ಬಳಿ ವಿಚಾರಿಸಿದ್ದಾರೆ. ಆಗ ತಾವು ಮೋಸ ಹೋಗಿರುವುದು ಯುವತಿಯರ ಅರಿವಿಗೆ ಬಂದಿದೆ.
ಮಡಿಕೇರಿ ಪೊಲೀಸರು ಮತ್ತು ಬೆಂಗಳೂರು ಪೊಲೀಸರ ನೆರವಿನೊಂದಿಗೆ ಯುವತಿಯರ ರಕ್ಷಣೆ ಮಾಡಿ ಆರೋಪಿ ಗಣೇಶ್‌ನನ್ನು ಬಂಧಿಸಿದ್ದಾರೆ.