ಪರಿಶಿಷ್ಟರ ಭಡ್ತಿ ಮೀಸಲಾತಿ: ರತ್ನಪ್ರಭಾ ವರದಿ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ

Update: 2017-07-26 14:23 GMT

ಬೆಂಗಳೂರು, ಜು. 26: ಎಸ್ಸಿ-ಎಸ್ಟಿ ವರ್ಗದ ‘ಭಡ್ತಿ ಮೀಸಲಾತಿ’ ವಿಚಾರ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಅಪರ ಮುಖ್ಯ ಕಾರ್ಯದರ್ಶಿ ರತ್ನಾಪ್ರಭಾ ನೀಡಿರುವ ವರದಿ ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಚಿವ ಸಂಪುಟ ಉಪ ಸಮಿತಿ ರಚನೆಗೆ ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ.

ಬುಧವಾರ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಸಚಿವ ಜಯಚಂದ್ರ, ಸುಪ್ರೀಂ ಕೋರ್ಟ್ ಫೆ.9ರಂದು ತೀರ್ಪು ನೀಡಿ ಭಡ್ತಿ ಮೀಸಲಾತಿ ರದ್ದುಗೊಳಿಸಿದ್ದು, ಭಡ್ತಿ ಪಡೆದವರನ್ನು ಹಿಂಭಡ್ತಿ ಮಾಡಲು ಆರು ತಿಂಗಳ ಗಡುವು ನೀಡಿತ್ತು. ಆ ಹಿನ್ನೆಲೆಯಲ್ಲಿ ಆ.9ರೊಳಗೆ ಕೋರ್ಟ್ ಆದೇಶ ಜಾರಿಯಾಗಬೇಕಿದೆ.

ಈ ಮಧ್ಯೆ ತೀರ್ಪು ಮರು ಪರಿಶೀಲನೆಗೆ ರಾಜ್ಯ ಸರಕಾರ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಆ ಅರ್ಜಿ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಕೋರ್ಟ್, ತನ್ನ ತೀರ್ಪಿನಲ್ಲಿ ಭಡ್ತಿ ಮೀಸಲಾತಿಯಿಂದ ಕಾರ್ಯದಕ್ಷತೆ ಕಡಿಮೆಯಾಗಲಿದೆ. ಎಲ್ಲ ವರ್ಗದವರಿಗೂ ಸೂಕ್ತ ಪ್ರಾತಿನಿಧ್ಯ ಸಿಗುವುದಿಲ್ಲ ಎಂಬುದು ಸೇರಿ ನಾಲ್ಕು ಅಂಶಗಳನ್ನು ಉಲ್ಲೇಖಿಸಿದೆ. ಈ ಬಗ್ಗೆ ಅಧ್ಯಯನಕ್ಕಾಗಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರತ್ನಾಪ್ರಭಾ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು.

ಸುಪ್ರೀಂ ಕೋರ್ಟ್‌ನ ಸಾಧಕ-ಬಾಧಕಗಳ ಸಂಬಂಧ ರತ್ನಪ್ರಭಾ ವರದಿಯ ಶಿಫಾರಸ್ಸುಗಳ ಕುರಿತು ಅಧ್ಯಯನ ನಡೆಸಲು, ಸಂಪುಟ ಉಪ ಸಮಿತಿ ರಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಸಮಿತಿ 10ದಿನಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ತಾನೂ ಸಮಿತಿ ಸದಸ್ಯರಾಗಿದ್ದು, ಸಂಪುಟ ಉಪ ಸಮಿತಿ ಅಧ್ಯಕ್ಷರು ಯಾರು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಲಿದ್ದಾರೆಂದು ಹೇಳಿದರು.

ಭಡ್ತಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರತ್ನಾಪ್ರಭಾ ವರದಿ ಜೊತೆಗೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಠಾಕೂರ್, ಗೋಪಾಲಗೌಡ ಅವರ ವರದಿಯನ್ನು ಸರಕಾರ ಪಡೆದಿದೆ. ಅಲ್ಲದೆ, ರಾಜ್ಯದ ಅಡ್ವೋಕೇಟ್ ಜನರಲ್ ಅವರು ವರದಿ ನೀಡಿದ್ದಾರೆ. ಎಲ್ಲವನ್ನು ಉಪ ಸಮಿತಿ ಅಧ್ಯಯನ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಜಯಚಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News