ವಿಧಾನಸೌಧ ಎದುರು ನಾಳೆ ವಾಲ್ಮೀಕಿ ಪುತ್ಥಳಿ ಸ್ಥಾಪನೆ: ವಿ.ಎಸ್.ಉಗ್ರಪ್ಪ

Update: 2017-07-26 14:23 GMT

ಬೆಂಗಳೂರು, ಜು.26: ವಿಧಾನಸೌಧದ ಪಶ್ಚಿಮ ಭಾಗದಲ್ಲಿರುವ ರಾಕ್ ಗಾರ್ಡನ್‌ನಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಗುರುವಾರ ಬೆಳಗ್ಗೆ 9 ರಿಂದ 10 ಗಂಟೆ ನಡುವೆ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ವಿಧಾನಸೌಧದ ಪಶ್ಚಿಮ ಭಾಗ ಹಾಗೂ ಶಾಸಕರ ಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ರಾಕ್ ಗಾರ್ಡ್‌ಗೆ ವಾಲ್ಮೀಕಿ ತಪೋವನ ಎಂದು ಮರು ನಾಮಕರಣವನ್ನು ಮಾಡಿದೆ ಎಂದರು.
ತಮಿಳುನಾಡಿನ ಮಹಾಬಲೀಪುರಂನಲ್ಲಿ ಕಪ್ಪು ಶಿಲೆಯಲ್ಲಿ 25 ಟನ್ ತೂಕದ 12 ಅಡಿ ಎತ್ತರದ ಪುತ್ಥಳಿ ಸಿದ್ಧವಾಗಿದೆ. ಪೀಠ ಸೇರಿದಂತೆ ನೆಲದಿಂದ 30 ಅಡಿ ಎತ್ತರವನ್ನು ಈ ಪುತ್ಥಳಿ ಹೊಂದಿರುತ್ತದೆ. ರಾಜ್ಯ ಸರಕಾರವು ಈ ಪುತ್ಥಳಿ ನಿರ್ಮಾಣ ಹಾಗೂ ತಪೋವನ ಅಭಿವೃದ್ಧಿಗಾಗಿ 1 ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದು ಉಗ್ರಪ್ಪ ಹೇಳಿದರು.

ಸಮುದಾಯದವರು ಸುಮಾರು 40 ಲಕ್ಷ ರೂ.ಗಳನ್ನು ಈ ಕಾರ್ಯಕ್ಕೆ ಒದಗಿಸಿದ್ದಾರೆ. ತಪೋವನದಲ್ಲಿ ಗಿಡ ಮರಗಳನ್ನು ಬೆಳೆಸಿ ಪರಿಸರ ಕಾಪಾಡಲು ತೋಟಗಾರಿಕೆ ಇಲಾಖೆಯು 30 ಲಕ್ಷ ರೂ.ಖರ್ಚು ಮಾಡಲಿದೆ. ನಾಳೆ ಪುತ್ಥಳಿಯನ್ನು ಪೀಠದ ಮೇಲೆ ಪ್ರತಿಷ್ಠಾಪಿಸಲಾಗುತ್ತಿದ್ದು, ಒಂದೂವರೆ ತಿಂಗಳೊಳಗೆ ಅಧಿಕೃತವಾಗಿ ಮುಖ್ಯಮಂತ್ರಿ ಅದನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಅವರು ಹೇಳಿದರು.

ವೀರಶೈವ, ಲಿಂಗಾಯತ ಧರ್ಮದ ವಿಚಾರದ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಲಿಂಗಾಯತ ಮುಖಂಡರ ಒತ್ತಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯೋಚಿತವಾಗಿ ಮಣಿದಿದ್ದಾರೆ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಿಸಲು ನಿರ್ಧರಿಸಿದ್ದಾರೆ. ರಾಜ್ಯ ಸರಕಾರವು ತನಗೆ ದತ್ತವಾಗಿರುವ ಅಧಿಕಾರ ಬಳಸಿಕೊಂಡು ಕೇಂದ್ರಕ್ಕೆ ಶಿಫಾರಸ್ಸು ಮಾಡಬಹುದು ಎಂದು ಉಗ್ರಪ್ಪ ತಿಳಿಸಿದರು.

ಒಂದು ಕಡೆ ವೀರಶೈವ, ಮತ್ತೊಂದು ಕಡೆ ಲಿಂಗಾಯತ. ಬಸವಣ್ಣನವರು ಲಿಂಗಾಯತ ಧರ್ಮದ ಕ್ರಾಂತಿ ಮಾಡಿದರು. ಅವರ ಸಮಾನತೆ ತತ್ವ, ಸಮಾಜದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಸವ ತತ್ವದ ಪ್ರತಿಪಾದಕರು. ಸಾಮಾಜಿಕ ನ್ಯಾಯದ ಪರವಾಗಿರುವ ಅವರು, ಬಸವ ಜಯಂತಿಯಂದೆ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಯಾರೂ ಮರೆಯಬಾರದು ಎಂದು ಅವರು ಹೇಳಿದರು.
ಚುನಾವಣಾ ರಾಜಕೀಯಕ್ಕಾಗಿ, ಲಿಂಗಾಯತರನ್ನು ಓಲೈಸಲು ಸರಕಾರ ಯತ್ನಿಸುತ್ತಿಲ್ಲ. ಬಡವರಿಗೆ ಆಹಾರದ ಖಾತ್ರಿ, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ, ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಕೆ, ರಾಜ್ಯದ ಏಕೈಕ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರು ನಾಮಕರಣ ಇಟ್ಟದ್ದು, ಬಸವಣ್ಣನ ವಿಚಾರಗಳಿಗೆ ಮುಖ್ಯಮಂತ್ರಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕೆ ಸಾಕ್ಷಿ ಎಂದು ಉಗ್ರಪ್ಪ ತಿಳಿಸಿದರು.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಿಸುವಂತೆ ಆ ಸಮುದಾಯದ ಮುಖಂಡರೇ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿದ್ದಾರೆ. ಇದರಲ್ಲಿ ರಾಜಕಾರಣ ಬೆರೆಸುವುದು ಸರಿಯಲ್ಲ. ರಾಜಕಾರಣ ಬೆರೆಸಿದರೆ ಅವರ ಸಣ್ಣತನ ತೋರಿಸಿದಂತಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News