ಶಾಲಿನಿ ರಜನೀಶ್ ವಿರುದ್ಧ ವಿಚಾರವಾದಿ ನರೇಂದ್ರ ನಾಯ್ಕ ದೂರು
ಬೆಂಗಳೂರು, ಜು.26: ಡೆಂಗ್ ಜ್ವರ ನಿವಾರಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವೈಜ್ಞಾನಿಕ ಸಲಹೆ ನೀಡಿದ್ದಾರೆಂದು ಆರೋಪಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜಿನೀಶ್ ವಿರುದ್ದ ವಿಚಾರವಾದಿ ನರೇಂದ್ರ ನಾಯ್ಕಾ ಅವರು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಶಾಲಿನಿ ರಜಿನೀಶ್ ಅವರು ಡೆಂಗ್ ನಿವಾರಣೆ ಬಗ್ಗೆ ಫೇಸ್ ಬುಕ್‌ನಲ್ಲಿ ಅವೈಜ್ಞಾನಿಕ ಸಲಹೆಯನ್ನ ಪೋಸ್ಟ್ ಮಾಡಿದ್ದಾರೆ. ಜವಾಬ್ದಾರಿಯುತ ಅಧಿಕಾರದಲ್ಲಿದ್ದುಕೊಂಡು ಈ ರೀತಿ ಪೋಸ್ಟ್ ಮಾಡುವುದು ಸರಿಯಲ್ಲ. ಹೀಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನರೇಂದ್ರ ನಾಯ್ಕ್ ಒತ್ತಾಯಿಸಿದ್ದಾರೆ.
ಏನು ಪೋಸ್ಟ್: ಜು.24ರಂದು ಬೆಳಗ್ಗೆ 6:24ಕ್ಕೆ ಡಾ.ಶಾಲಿನಿ ರಜನೀಶ್ ಡೆಂಗ್ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಡೆಂಗ್ ನಿವಾರಣೆಗೆ ಬೆಲ್ಲವನ್ನು ಈರುಳ್ಳಿಯೊಂದಿಗೆ ಸೇವಿಸಬೇಕೆಂದು ಸಲಹೆ ನೀಡಿದ್ದರು. ಮಾಹಿತಿ ಎಲ್ಲರಿಗೂ ತಲುಪಲು ಹೆಚ್ಚು ಶೇರ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.
ಆದರೆ, ಇದು ಅವೈಜ್ಞಾನಿಕ ಎಂದು ಆರೋಪಿಸಿರುವ ನರೇಂದ್ರ ನಾಯ್ಕ ಈ ಪೋಸ್ಟ್‌ನ್ನು ಜನ ಯೋಚಿಸದೇ ಸಾವಿರಾರು ಸಂಖ್ಯೆಯಲ್ಲಿ ಶೇರ್ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯಾಗಿ ಜನರಿಗೆ ಆರೋಗ್ಯದ ವಿಚಾರದಲ್ಲಿ ಅವೈಜ್ಞಾನಿಕ ಮಾಹಿತಿ ನೀಡಿರುವುದು ಸರಿಯಲ್ಲ. ಇದು ಜನಸಾಮಾನ್ಯರಿಗೆ ತಪ್ಪುಸಂದೇಶ ನೀಡುತ್ತದೆ. ಈ ತಪ್ಪುಕಾರ್ಯದ ವಿರುದ್ಧ ಶಾಲಿನಿ ರಜನೀಶ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಚಿವರಿಗೆ ನರೇಂದ್ರ ನಾಯ್ಕಿ ಮನವಿ ಮಾಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಶಾಲಿನಿ ರಜನೀಶ್ ಹಾಕಿರುವ ಪೋಸ್ಟನ್ನು ಈಗಾಗಲೇ 11,030 ಮಂದಿ ಶೇರ್ ಮಾಡಿದ್ದು, 911 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಲೈಕ್ ಮಾಡಿದವರ ಸಂಖ್ಯೆ 3100ನ್ನು ಮೀರಿದೆ. ಇಷ್ಟೊಂದು ಮಂದಿ ವೀಕ್ಷಿಸಿರುವ ಈ ಪೋಸ್ಟ್ ಇದೀಗ ವಿವಾದಕ್ಕೆ ಈಡಾಗಿದೆ. ಈ ಬಗ್ಗೆ ಮಾತನಾಡಿದ ವಿಚಾರವಾದಿ ನರೇಂದ್ರ ನಾಯ್ಕ, ಶಾಲಿನಿ ರಜನೀಶ್ ಅವರು ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ಆಗಾಗ ತಪ್ಪು ಸಂದೇಶ ನೀಡುತ್ತಲೇ ಬಂದಿದ್ದಾರೆ. ಇವರ ಈ ಸಂದೇಶ ದೊಡ್ಡ ಆತಂಕ ಮೂಡಿಸುತ್ತಿದೆ. ನಾಳೆ ಡೆಂಗ್ ಜ್ವರಕ್ಕೆ ತುತ್ತಾದವರು ಇದೇ ಔಷಧ ಎಂದು ತಿಳಿದು ವೈದ್ಯರ ಬಳಿ ಹೋಗದೆ ಬೆಲ್ಲ, ಹಸಿ ಈರುಳ್ಳಿ ತಿಂದು ಮನೆಯಲ್ಲೇ ಕುಳಿತರೆ ಅದು ಸಾವಿಗೂ ಕಾರಣವಾಗಬಹುದು. ಜನರಿಗೆ ವೈದ್ಯರ ಬಳಿ ಹೋಗಿ ಎಂದು ಹೇಳಬೇಕಾದ್ದು ಅನಿವಾರ್ಯ. ಇವರ ಹೇಳಿಕೆಯನ್ನು ಜನ ನಂಬುವ ಸಾಧ್ಯತೆ ಹೆಚ್ಚು. ಇಂತಹ ಪ್ರಚಾರ ನೀಡುವ ಪೋಸ್ಟ್‌ಗಳನ್ನು ಹಾಕುವುದು ತರವಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಜನಪ್ರಿಯತೆ ಪಡೆಯುವ ಏಜೆಂಟರ ರೀತಿ ವರ್ತಿಸುವುದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ.
ಈಗಾಗಲೇ ನಾನು ಸಾಮಾಜಿಕ ಜಾಲತಾಣದಲ್ಲಿ ಬಂದ ಪೋಸ್ಟ್‌ಗೆ ಸಂಬಂಧಿಸಿದಂತೆ ಅಧಿಕೃತವಾಗಿ ಪೋಸ್ಟ್ ಹಾಗೂ ಇಮೇಲ್ ಮೂಲಕ ಆರೋಗ್ಯ ಸಚಿವರಿಗೆ ದೂರು ಸಲ್ಲಿಸಿದ್ದೇನೆ. ಕ್ರಮ ಕೈಗೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.