×
Ad

ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲು ಮುಖ್ಯಮಂತ್ರಿ ಕರೆ

Update: 2017-07-26 20:46 IST

ಬೆಂಗಳೂರು, ಜು. 26: ಶೋಷಿತರ, ಮಹಿಳೆಯರ ಸಬಲೀಕರಣ ಮತ್ತು ವೈಚಾರಿಕತೆಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ಸಂಪ್ರತಿ ಮೀಡಿಯಾ ಪ್ರೈವೇಟ್ ಲಿ. ಸಂಸ್ಥೆ ಆಯೋಜಿಸಿದ ನೂತನ ಖಾಸಗಿ ಸುದ್ದಿ ವಾಹಿನಿ ‘ಫೋಕಸ್ ಟಿವಿ’ ಲಾಂಚನ ಅನಾವರಣಗೊಳಿಸಿ ಅವರು ಮಾತನಡಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸ್ವಾತಂತ್ರ ಪೂರ್ವದಲ್ಲಿದ್ದ ಮಾಧ್ಯಮಗಳ ಜವಾಬ್ದಾರಿ ಈಗ ಬದಲಾಗಿದೆ. ಮೌಲ್ಯಯುತ ಸುದ್ದಿಗಳಿಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡದಿದ್ದರೆ ಜನರೇ ಅಂತಹ ಸುದ್ದಿ ಮಾಧ್ಯಮಗಳನ್ನು ಧಿಕ್ಕರಿಸಲಿದ್ದಾರೆ ಎಂದು ತಿಳಿಸಿದರು.
ಮೌಢ್ಯಗಳಿಗೆ ಇಂದಿನ ಮಾಧ್ಯಮಗಳು ಹೆಚ್ಚು ಒತ್ತು ನೀಡುತ್ತಿರುವುದು ಬೇಸರದ ಸಂಗತಿ. ದೇಶದಲ್ಲಿ ಮೊದಲ ಬಾರಿಗೆ ಸುದ್ದಿ ಮಾಧ್ಯಮಕ್ಕೆ ಮಹಿಳೆಯ ಸಂಪಾದಕತ್ವದಲ್ಲಿ ವಾಹಿನಿ ರೂಪುಗೊಂಡಿದೆ. ಸಮ ಸಮಾಜ ನಿರ್ಮಾಣ ಮತ್ತು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಫೋಕಸ್ ನೀಡಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮಾತನಾಡಿ, ಮಾಧ್ಯಮ ಎಂಬುವುದು ಸಂವಿಧಾನದಲ್ಲಿ ಸೃಷ್ಟಿಯಾಗಿಲ್ಲ. ಆದರೂ ಜನರು ಸಂವಿಧಾನದ ನಾಲ್ಕನೆ ಆಧಾರ ಸ್ತಂಭ ಎಂದು ಗುರುತಿಸಿದ್ದಾರೆ. ಈ ಸ್ಥಾನವನ್ನು ಮಾಧ್ಯಮಗಳು ಕಾಪಾಡಿಕೊಳ್ಳಬೇಕು ಎಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಾಲಕೃಷ್ಣ, ಟಿ. ಸೋಮಶೇಖರ್, ಬೈರತಿ ಬಸವರಾಜು, ಗೋವಿಂದರಾಜು, ಫೋಕಸ್ ವಾಹಿನಿಯ ಸಂಪಾದಕಿ ಜ್ಯೋತಿ ಇರ್ವತ್ತೂರು, ರಾಧಾ ಹಿರೇಗೌಡರ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News