×
Ad

ಉಪ ಸಾರಿಗೆ ಆಯುಕ್ತರ ವಿರುದ್ಧ ಎಸಿಬಿ ತನಿಖೆ ತಡೆಗೆ ಹೈಕೋರ್ಟ್ ನಕಾರ

Update: 2017-07-26 21:36 IST

ಬೆಂಗಳೂರು, ಜು.26: ಆದಾಯ ಮೀರಿ ಆಸ್ತಿಗಳಿಕೆ ಆರೋಪ ಸಂಬಂಧ ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಟಿ. ಹಾಲಸ್ವಾಮಿ ವಿರುದ್ಧ ಎಸಿಬಿ ತನಿಖೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

 ಎಸಿಬಿ ದಾಖಲಿಸಿರುವ ಪ್ರಕರಣ ರದ್ದು ಕೋರಿ ಕೆ. ಆರ್.ಪುರಂ ಹಾಗೂ (ಪ್ರಭಾರ) ಜಂಟಿ ಆಯುಕ್ತರಾದ ಕೆ.ಟಿ.ಹಾಲಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ, ಆದಾಯಕ್ಕಿಂತ ಹೆಚ್ಚು ಗಳಿಕೆ ಪ್ರಕರಣ ಕುರಿತಂತೆ ಭ್ರಷ್ಟಾಚಾರ ನಿಗ್ರಹ ದಳ ನಡೆಸುತ್ತಿರುವ ತನಿಖೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿತು.

ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ತಮ್ಮ ಕಕ್ಷಿದಾರರಿಗೆ ಐಎಎಸ್ ಭಡ್ತಿಗೆ ಶಿಪಾರಸ್ಸು ಮಾಡಿತ್ತು. ದುರುದ್ದೇಶದಿಂದ ತಮ್ಮ ಮೇಲೆ ಎಸಿಬಿ ಸುಳ್ಳು ಪ್ರಕರಣ ದಾಖಲಿಸಿದೆ. ದಾಳಿ ನಡೆಸಿರುವ ವೇಳೆ ಕೇಸ್ ಡೈರಿಯಲ್ಲಿ ದಾಖಲಿಸಿಲ್ಲ. ಹೀಗಾಗಿ, ತಮ್ಮ ವಿರುದ್ದ ಎಸಿಬಿ ದಾಖಲಿಸಿರುವ ಪ್ರಕರಣವನ್ನು ರದ್ದು ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಸಿಬಿ ಪರ ವಕೀಲ ಬಿ.ಎನ್.ಜಗದೀಶ್, ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 19(3)ರ ಅನ್ವಯ ಆದಾಯಕ್ಕಿಂತ ಮೀರಿ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ತಡೆಯಾಜ್ಷೆ ನೀಡುವಂತಿಲ್ಲ. ಈ ಸಂಬಂಧ ಸುಪ್ರೀಂಕೋರ್ಟ್ ಹಲವಾರು ಪ್ರಕರಣಗಳಲ್ಲಿ ಸ್ಫಷ್ಟಪಡಿಸಿದೆ. ಅಲ್ಲದೆ ಎಸಿಬಿ ನಡೆಸುತ್ತಿರುವ ತನಿಖೆಯು ಸಹ ಕಾನೂನು ಬದ್ಧವಾಗಿದೆ ಎಂದರು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ದಾಳಿಯ ಬಗ್ಗೆ ದಾಖಲಿಸಿರುವ ಕೇಸ್ ಡೈರಿಯನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಅದನ್ನು ಪರಿಶೀಲಿಸಿ ದಾಖಲಿಸಿಕೊಂಡಿದ್ದೇವೆ ಎಂದು ಅಭಿಪ್ರಾಯ ಪಟ್ಟು ತನಿಖೆಗೆ ತಡೆ ನೀಡಲು ನಿರಾಕರಿಸಿ, ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News