ಅಲ್-ಅಕ್ಸ ಮಸೀದಿಯ ಪ್ರವೇಶದ್ವಾರದ ನಿರ್ಬಂಧವನ್ನು ಹಿಂದಕ್ಕೆ ಪಡೆದ ಇಸ್ರೇಲ್

Update: 2017-07-27 10:23 GMT

ಫೆಲೆಸ್ತೀನ್, ಜು.27: ಕಳೆದ ಕೆಲ ದಿನಗಳ ಹಿಂದೆ ಜೆರುಸಲೇಂನ ಐತಿಹಾಸಿಕ ಅಲ್-ಅಕ್ಸ ಮಸೀದಿಯ ಮೇಲೆ ಅತಿಕ್ರಮಣ ಮಾಡಿದ್ದ ಇಸ್ರೇಲ್ ಮಸೀದಿಯ ಪ್ರವೇಶದ್ವಾರದಲ್ಲಿರುವ ನಿರ್ಬಂಧವನ್ನು ತೆಗೆದುಹಾಕಿದೆ.

ಅಲ್-ಅಕ್ಸ ಮಸೀದಿಯ ಮೇಲೆ ನಿರ್ಬಂಧ ಹೇರಿದ್ದ ಇಸ್ರೇಲ್ ಕ್ರಮದ ವಿರುದ್ಧ ಫೆಲೆಸ್ತೀನ್ ನ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಳನ್ನು ನಡೆಸಿದ್ದರು. ಇಷ್ಟೇ ಅಲ್ಲದೆ ಈ ಸಂದರ್ಭ ಇಸ್ರೇಲ್ ಪಡೆ ಫೆಲೆಸ್ತೀನಿಯರನ್ನು ಹತ್ಯೆಗೈದಿತ್ತು. ಇದೀಗ ತೀವ್ರ ಪ್ರತಿಭಟನೆಯ ನಂತರ ಮಸೀದಿಯ ಕಾಂಪೌಂಡ್ ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದ್ದ ರೈಲಿಂಗ್ಸ್, ಗೇಟುಗಳು ಹಾಗೂ ಕ್ಯಾಮರಾಗಳನ್ನು ಅಳವಡಿಸಲು ಮಾಡಿದ್ದ ತಾತ್ಕಾಲಿಕ ನಿರ್ಮಾಣಗಳನ್ನು ಅಲ್ಲಿಂದ ಗುರುವಾರ ಬೆಳಗ್ಗೆ ತೆಗೆಯಲಾಗಿದೆ.

50 ವರ್ಷ ಕೆಳಗಿನ ಫೆಲೆಸ್ತೀನಿ ಪುರುಷರು ಅಲ್-ಅಕ್ಸ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸುವುದರ ಮೇಲೂ ಇಸ್ರೇಲ್ ನಿರ್ಬಂಧ ಹೇರಿತ್ತು. ಇದರ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಕನಿಷ್ಠ ಆರು ಫೆಲೆಸ್ತೀನಿಯರನ್ನು ಇಸ್ರೇಲ್ ಪಡೆ ಹತ್ಯೆಗೈದಿತ್ತು. ನೂರಾರು ಮಂದಿ ಗಾಯಗೊಂಡಿದ್ದರು.

ಇಸ್ರೇಲ್ ನಿರ್ಬಂಧವನ್ನು ತೆಗೆದು ಹಾಕಿದ ನಂತರ ಫೆಲೆಸ್ತೀನಿಯರು ಸಂಭ್ರಮಾಚರಿಸಿದರು. "ಇಂದು ಸಂತೋಷದ ಹಾಗೂ ದುಃಖದ ದಿನ. ಇಸ್ರೇಲ್ ಅತಿಕ್ರಮಣದಿಂದ ಹಲವರು ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡಿದ್ದಾರೆ. ಇದರಿಂದಾಗಿ ಇಂದು ಸಂತೋಷದ ಜೊತೆಗೆ ದುಃಖವೂ ಇದೆ" ಎಂದು ಫೆಲೆಸ್ತೀನ್ ಪ್ರಜೆಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News