ಹುತ್ತಕ್ಕೆ ಹಾಲು ಹಾಕಿದರೆ ಹಾವುಗಳು ಸಾಯಲಿವೆ: ವಸುಂಧರಾ ಭೂಪತಿ

Update: 2017-07-27 12:42 GMT

ಬೆಂಗಳೂರು, ಜು.27: ನಾಗರ ಪಂಚಮಿಯಂದು ಹುತ್ತಕ್ಕೆ ಹಾಲು ಎರೆಯುವುದರಿಂದ ಹಾವುಗಳು ಸಾಯಲಿವೆ. ಹೀಗಾಗಿ ಹುತ್ತಕ್ಕೆ ಹಾಕುವ ಹಾಲನ್ನು ಬಡ ಮಕ್ಕಳಿಗೆ ಕುಡಿಯಲು ಕೊಡಿ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಗುರುವಾರ ಮಾನವ ಬಂಧುತ್ವ ವೇದಿಕೆ ನಗರದ ವಲ್ಲಭನಿಕೇತನ ಆಶ್ರಮದಲ್ಲಿ ‘ಬಸವ ಪಂಚಮಿ’ ಪ್ರಯುಕ್ತ ಆಯೋಜಿಸಿದ್ದ ‘ಹುತ್ತಕ್ಕೆ ಹಾಲನ್ನು ಹಾಕುವ ಬದಲು ಮಕ್ಕಳು-ವೃದ್ಧರಿಗೆ ನೀಡಿ’ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಾವುಗಳು ಹಾಲು ಕುಡಿಯುವುದಿಲ್ಲವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹುತ್ತದಲ್ಲಿರುವ ಹಾವಿಗೆ ಹಾಲನ್ನು ಸುರಿದರೆ ಹಾಲು ಮತ್ತು ಹುತ್ತದ ಮಣ್ಣು ಮಿಶ್ರಗೊಂಡು ಹಾವು ಉಸಿರುಗಟ್ಟಿ ಸಾಯುವ ಸಂದರ್ಭಗಳಿವೆ. ಹೀಗಾಗಿ ನಾಗರ ಪಂಚಮಿ ನೆಪದಲ್ಲಿ ಹಾವನ್ನು ಸಾಯಿಸುವಂತಹ ಆಚರಣೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ನಾಡಿನಲ್ಲಿ ಶೇ.65ಕ್ಕಿಂತ ಹೆಚ್ಚು ಮಹಿಳೆಯರು ಹಾಗೂ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಹುತ್ತಕ್ಕೆ ಸುರಿಯುವ ಮೂಲಕ ಮೌಢ್ಯಾಚರಣೆ ಪ್ರದರ್ಶಿಸುವುದು ಸರಿಯಲ್ಲ. ಈ ಬಗ್ಗೆ ಜನತೆಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಲೇಖಕಿ ಕೆ.ಷರೀಫಾ ಮಾತನಾಡಿ, ಹಬ್ಬದ ಆಚರಣೆಗಳಲ್ಲಿ ಮೌಢ್ಯಾಚರಣೆ ನಡೆಯುವುದಕ್ಕೆ ಪ್ರಜ್ಞಾವಂತರು ಅವಕಾಶ ಮಾಡಿಕೊಡಬಾರದು. ಸಾವಿರಾರು ವರ್ಷಗಳಿಂದ ರೂಢಿಯಲ್ಲಿದೆ ಎಂದ ಮಾತ್ರಕ್ಕೆ ಅನಿಷ್ಟವಾದ ಆಚರಣೆಗಳಿಗೆ ಮೌನ ಸಮ್ಮತಿಯನ್ನು ಕೊಡುವ ಅಗತ್ಯವಿಲ್ಲ. ಹೀಗಾಗಿ ಹುತ್ತಕ್ಕೆ ಹಾಲನ್ನು ಹಾಕುವಂತಹ ಮೌಢ್ಯಾಚರಣೆಯನ್ನು ನಾವೆಲ್ಲರೂ ನಿಲ್ಲಿಸಬೇಕಾಗಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಜಯಕುಮಾರ್ ಮಾತನಾಡಿ, ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರನಿಗೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಕೋಟ್ಯಂತರ ಲೀಟರ್ ಹಾಲು, ಮೊಸರನ್ನು ಸುರಿಯಲಾಗುತ್ತದೆ. ಇದಕ್ಕಿಂತ ದೊಡ್ಡದಾದ ಮೂಢನಂಬಿಕೆ ಮತ್ತೊಂದಿರಲಾರದು. ಇಂತಹ ಆಚರಣೆಯನ್ನು ವಿದ್ಯಾವಂತರೇ ಮಾಡುತ್ತಿರುವುದು, ಸಮಾಜ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ಹಿರಿಯ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಮಾತನಾಡಿ,  ಕಾಡುಮಲ್ಲೇಶ್ವರ ದೇವಸ್ಥಾನದ ಸುತ್ತಮುತ್ತ ನೂರಾರು ಸಂಖ್ಯೆಯಲ್ಲಿ ಬೇವಿನ ಸಸಿಗಳನ್ನು ನೆಟ್ಟಿದ್ದೆವು. ಆದರೆ, ಟಿವಿ ಕಾರ್ಯಕ್ರಮದಲ್ಲಿ ಅವಿವೇಕಿ ಜ್ಯೋತಿಷಿಯೊಬ್ಬರು ಬೇವಿನ ಸಸಿಯ ಚಿಗುರನ್ನು ತಿಂದರೆ ಒಳ್ಳೆಯದಾಗುತ್ತದೆ ಎಂದು ಮೌಢ್ಯ ಬಿತ್ತಿದರು. ಅದನ್ನೇ ನಂಬಿದ ಜನ ನಾವು ನೆಟ್ಟಿದ್ದ ಬೇವಿನ ಸಸಿಗಳ ಚಿಗುರನ್ನು ಕೀಳುವ ಮೂಲಕ ಹಲವು ಬೇವಿನ ಸಸಿಗಳು ಹುಟ್ಟುವ ಹಂತದಲ್ಲಿಯೇ ನಾಶ ಹೊಂದಿದವು ಎಂದು  ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್, ಲೇಖಕಿ ಡಾ.ಲೀಲಾಸಂಪಿಗೆ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಇ.ಬಸವರಾಜು, ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಅನಂತ್ ನಾಯಕ್, ಜಿಲ್ಲಾ ಕಾರ್ಯದರ್ಶಿ ಮೂಡನಹಳ್ಳಿ ನಾಗರಾಜು, ಜನದನಿಯ ಯೇಜಸ್, ಸಾಮಾಜಿಕ ಕಾರ್ಯಕರ್ತ ಸಾಜಿದ್ ಅಲಿ ಕಲಬುರ್ಗಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News