ಕಾನೂನು ಉಲ್ಲಂಘಿಸಿದ್ದರೆ ಸಂಜಯ್ ದತ್‌ನ್ನು ಮತ್ತೆ ಜೈಲಿಗೆ ಕಳುಹಿಸಿ

Update: 2017-07-27 17:22 GMT

ಮುಂಬೈ, ಜು. 27: 1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿ ಬಾಲಿವುಡ್ ನಟ ಸಂಜಯ್ ದತ್‌ಗೆ ಪರೋಲ್ ನೀಡುವಾಗ ನಿಯಮ ಉಲ್ಲಂಘಿಸಲಾಗಿದೆ ಎಂದು ಅನಿಸಿದರೆ ಅವರನ್ನು ಮತ್ತೆ ಜೈಲಿಗೆ ಕಳುಹಿಸಲು ನಮ್ಮದೇನು ಅಭ್ಯಂತರ ಇಲ್ಲ ಎಂದು ಮಹಾರಾಷ್ಟ್ರ ಸರಕಾರ ಮುಂಬೈ ಹೈಕೋರ್ಟ್‌ಗೆ ತಿಳಿಸಿದೆ.

ಐದು ವರ್ಷ ಶಿಕ್ಷೆ ಪೂರ್ಣಗೊಳಿಸುವ ಮುನ್ನ 57 ವರ್ಷದ ಸಂಜಯ್ ದತ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿರುವುದಕ್ಕೆ ಸ್ಪಷ್ಟನೆ ನೀಡುವಂತೆ ಕಳೆದ ತಿಂಗಳು ಬಾಂಬೆ ಹೈಕೋರ್ಟ್ ರಾಜ್ಯಸರಕಾರಕ್ಕೆ ತಿಳಿಸಿತ್ತು.

 ಉತ್ತಮ ನಡೆತೆಯ ಕಾರಣಕ್ಕೆ ಸಂಜಯ್ ದತ್‌ನನ್ನು 8 ತಿಂಗಳು ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ. ನಟನ ಉತ್ತಮ ನಡೆತೆಗೆ ಯಾವ ಮಾನದಂಡ ಅನ್ವಯಿಸಲಾಗಿದೆ ಎಂದು ವಿವರಿಸುವಂತೆ ನ್ಯಾಯಮೂರ್ತಿಗಳು ಸರಕಾರಕ್ಕೆ ಆದೇಶಿಸಿದ್ದಾರೆ.

ಸಂಜಯ್ ದತ್‌ನ ನಡತೆ ಉತ್ತಮ ಎಂದು ಅಧಿಕಾರಿಗಳು ಹೇಗೆ ಅಂದಾಜಿಸಿದರು. ಅರ್ಧ ಅವಧಿ ಪರೋಲ್‌ನಲ್ಲಿ ಹೊರಗೆ ಇದ್ದಾಗ ಆತನ ನಡತೆ ಅಂದಾಜಿಸಲು ಅವರಿಗೆ ಯಾವಾಗ ಸಮಯ ಸಿಕ್ಕಿತು ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಕಳೆದ ತಿಂಗಳು ಪ್ರಶ್ನಿಸಿದ್ದರು.

 ಸಾರ್ವಜನಿಕ ಹಿತಾಸಕ್ತಿ ದಾವೆ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೈಕೋರ್ಟ್ ನೀಡಿದೆ. ಸಂಜಯ್ ದತ್‌ಗೆ ಪರೋಲ್ ನೀಡುವಲ್ಲಿ ಕಾನೂನು ಉಲ್ಲಂಘಿಸಲಾಗಿದೆ ಎಂದು ಕಂಡು ಬಂದರೆ ಆತನನ್ನು ಮತ್ತೆ ಜೈಲಿಗೆ ಕಳುಹಿಸುವುದರಲ್ಲಿ ನಮಗೆ ಯಾವುದೇ ಆಕ್ಷೇಪ ಇಲ್ಲ ಎಂದು ಸರಕಾರದ ಪರ ವಕೀಲ ಇಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News