ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರಕ್ಕೆ ಪ್ರಧಾನಿ ಮೋದಿ ಆಸಕ್ತಿ ತೋರಲಿ: ಕೆ.ಷರೀಫಾ

Update: 2017-07-28 15:55 GMT

ಬೆಂಗಳೂರು, ಜು. 28: ‘ನೋಟುಗಳ ಅಮಾನ್ಯೀಕರಣಗೊಳಿಸುವ ಮತ್ತು ಜಿಎಸ್ಟಿಯನ್ನು ರಾತ್ರೋರಾತ್ರಿ ಜಾರಿಗೆ ತರಲು ಪ್ರಧಾನಿ ಮೋದಿ ತೋರಿದ ಆಸಕ್ತಿಯನ್ನು ಸಂಸತ್ತಿನಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರಲು ತೋರಿಸಲಿ’ ಎಂದು ಲೇಖಕಿ ಡಾ.ಕೆ.ಶರೀಫಾ ಸವಾಲು ಹಾಕಿದರು.

ಶುಕ್ರವಾರ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಹಾಗೂ ದಲಿತ ಸಂಘರ್ಷ ಸಮಿತಿ(ಭೀಮವಾದ) ಆಯೋಜಿಸಿದ್ದ ‘ಸಂವಿಧಾನ ಬಜಾವೋ-ದೇಶ್ ಬಜಾವೋ’ ಮಹಿಳಾ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳಾ ಮೀಸಲಾತಿ ಕುರಿತ ವಿಧೇಯಕವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಂಸತ್ತಿನಲ್ಲಿ ಮಂಡಿಸಿ 21 ವರ್ಷಗಳೇ ಕಳೆದರೂ ಇನ್ನೂ ಜಾರಿಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ದೇಶದಲ್ಲಿನ 1,600 ಮಹಿಳಾ ಸಂಘಟನೆಗಳು ಮಹಿಳಾ ಮೀಸಲಾತಿ ಕುರಿತು ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಹಿಳಾ ಮೀಸಲಾತಿಗೆ ಒಪ್ಪಿಗೆ ನೀಡಿದರೆ ತಮ್ಮ ಸ್ಥಾನಗಳಿಗೆ ಎಲ್ಲಿ ಕುತ್ತು ಬರುತ್ತೆ ಎಂದು ಅಲಕ್ಷ ತೋರುತ್ತಿದ್ದಾರೆ ಎಂದು ದೂರಿದರು.

ಸಂವಿಧಾನ ದಲಿತ, ಮಹಿಳೆಯರ ರಕ್ಷಣೆ ನಿಲ್ಲುತ್ತದೆ ಎಂದು ಅನುಮಾನ ಕಾಡತೊಡಗಿದೆ. ಸಂವಿಧಾನವನ್ನು ವಿರೋಧಿಸುತ್ತಿದ್ದ ಆರ್‌ಎಸ್‌ಎಸ್ ನಾಯಕರನ್ನೇ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುರಸ್ಕರಿಸುತ್ತಿದ್ದಾರೆ. ರಾಷ್ಟ್ರಪತಿ ಸ್ಥಾನ ಸ್ವೀಕರಿಸಿದ ಬಳಿಕ ಮಾತನಾಡಿದ ಮೊದಲ ಭಾಷಣದಲ್ಲಿ ಅಂಬೇಡ್ಕರ್ ಅವರ ಕುರಿತು ಒಂದೇ ಒಂದು ಮಾತನ್ನು ಕೂಡ ಆಡದ ಕೋವಿಂದ್ ಹೇಗೆ ದಲಿತರ ‘ರಕ್ಷಕ ಮತ್ತು ಪ್ರತಿನಿಧಿ’ ಆಗುತ್ತಾರೆ ಎಂದು ಪ್ರಶ್ನಿಸಿದರು.

ಪಠ್ಯ ಪುಸ್ತಕಗಳಲ್ಲಿ ರಾಷ್ಟ್ರಕವಿ ಟ್ಯಾಗೂರ್ ಅವರ ತತ್ವ ಹಾಗೂ ಉರ್ದು ಪದಗಳನ್ನು ತೆಗೆಯಬೇಕು ಎಂದು ಆರೆಸೆಸ್ಸ್ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಬಹುತ್ವಕ್ಕೆ ಕೊಂಕು ತರುತ್ತಿರುವ ಮನುವಾದಿಗಳ ವಿರುದ್ಧ ಮಹಿಳೆಯರನ್ನು ಜಾಗೃತಗೊಳಿಸಬೇಕಿದೆ ಎಂದು ತಿಳಿಸಿದರು.

ಸಂವಿಧಾನದ ಮೇಲೆ ಸರ್ಜಿಕಲ್ ದಾಳಿ: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಂವಿಧಾನದ ಮೇಲೆ ರಾತ್ರೋರಾತ್ರಿ ಸರ್ಜಿಕಲ್ ದಾಳಿ ಮಾಡಿ ಮನುವಾದ ಶಾಸ್ತ್ರ ಜಾರಿಗೆ ತರುವ ಕಾಲ ದೂರವೇನಿಲ್ಲ ಎಂದು ದಲಿತ ಸಂಘರ್ಷ ಸಮಿತಿ(ಭೀಮವಾದ)ದ ಅಧ್ಯಕ್ಷ ಆರ್.ಮೋಹನ್ ರಾಜ್ ಭೀತಿ ವ್ಯಕ್ತಪಡಿಸಿದರು.

ಮೂಲಭೂತ ಹಕ್ಕುಗಳ ಮೇಲೆ ದಾಳಿ ಮಾಡುತ್ತಿರುವ ಕೋಮುವಾದಿ ಮತ್ತು ಸಂವಿಧಾನ ವಿರೋಧಿಗಳ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ಕುರಿತು ದೇಶದ ಪ್ರತಿ ಗ್ರಾಮದಲ್ಲಿ ಮಹಿಳೆಯರನ್ನು ಸುಶಿಕ್ಷಿತರನ್ನಾಗಿಸಲು ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಆಂದೋಲನ ರೂಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ.ಕಾವಲಮ್ಮ, ಸಮಿತಿಯ ಕಾರ್ಯಾಧ್ಯಕ್ಷ ಬಸವರಾಜ್ ಕೌತಾಳ್, ದಲಿತ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಡಾ.ಮನೋಹರ್ ಚಂದ್ರ ಪ್ರಸಾದ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News