ರಾಜ್ಯಕ್ಕೆ ಜೆಡಿಎಸ್ ಅನಿವಾರ್ಯ: ಕುಮಾರಸ್ವಾಮಿ

Update: 2017-07-28 12:54 GMT

ಬೆಂಗಳೂರು, ಜು. 28: ರಾಜ್ಯದ ರೈತರು ಮತ್ತು ಜನ ಸಾಮಾನ್ಯರ ಹಿತರಕ್ಷಣೆ ಮಾಡುವಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ಸಂಪೂರ್ಣ ವಿಫಲವಾಗಿದ್ದು, ಜೆಡಿಎಸ್ ಅನಿವಾರ್ಯ ಎಂಬ ಮನೋಭಾವ ಜನರಲ್ಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಆಂಧ್ರ ಪ್ರದೇಶದ ತಿರುಪತಿ ತಿರುಮಲದಲ್ಲಿ ಶ್ರೀವೆಂಕಟೇಶ್ವರನ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಜನತೆ ರಾಜ್ಯಕ್ಕೆ ಜೆಡಿಎಸ್ ಅನಿವಾರ್ಯ ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಕೆ ಮಾಡಿದರೆ ಜೆಡಿಎಸ್ ಪಕ್ಷಕ್ಕೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ಆಡಳಿತ ಮತ್ತು ನಡವಳಿಕೆಗಳಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸತತ ಬರಗಾಲವಿದ್ದರೂ, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಅದೇ ರೀತಿ ಕೇಂದ್ರದ ಬಿಜೆಪಿ ಸರಕಾರವೂ, ಕರ್ನಾಟಕ ರಾಜ್ಯದ ಸಮಸ್ಯೆಗಳ ಬಗ್ಗೆ ಆಸ್ಥೆ ವಹಿಸುತ್ತಿಲ್ಲ. ರೈತರ ಹಿತಕಾಪಾಡುವಲ್ಲಿ ರಾಷ್ಟ್ರೀಯ ಪಕ್ಷಗಳು ಸೋತಿವೆ ಎಂದು ದೂರಿದರು.

ಬಾಲಾಜಿಗೆ ಪ್ರಾರ್ಥನೆ: ರಾಜ್ಯದ ಜನರು ಹಾಗೂ ರೈತರು ನೆಮ್ಮದಿಯ ಬದುಕನ್ನು ನಡೆಸಬೇಕೆಂದು ಆಶೀರ್ವಾದ ಮಾಡುವಂತೆ ಬಾಲಾಜಿಯಲ್ಲಿ ಪ್ರಾರ್ಥಿಸಿದ್ದೇನೆ. ಬಹಳ ದಿನಗಳಿಂದ ಶ್ರೀನಿವಾಸನ ದರ್ಶನ ಪಡೆಯಬೇಕೆಂಬ ಅಪೇಕ್ಷೆಯಿತ್ತು. ಹೀಗಾಗಿ ದೇವರ ದರ್ಶನ ಪಡೆದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News