75ನೆ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆ

Update: 2017-07-28 12:39 GMT

ಬೆಂಗಳೂರು, ಜು. 28: ಕುಟುಂಬ ಗ್ರಾಹಕ ವೆಚ್ಚ, ಆರೋಗ್ಯಕ್ಕೆ ಸಾರ್ವಜನಿಕರು ಮಾಡುವ ವೆಚ್ಚಕ್ಕೆ ಹಾಗೂ ಶಿಕ್ಷಣಕ್ಕೆ ಸಾರ್ವಜನಿಕರು ಮಾಡುವ ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿಯ ಕುರಿತು 75ನೇ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆ ಜುಲೈ 2017 ರಿಂದ 2018 ರವರೆಗೆ ನಡೆಯಲಿದೆ ಎಂದು ರಾಷ್ಟ್ರೀಯ ಮಾಪನ ಸಮೀಕ್ಷೆಯ ವಿಭಾಗೀಯ ನಿರ್ದೇಶಕಿ ರಾಜೇಶ್ವರಿ ಕಸ್ತೂರಿ ತಿಳಿಸಿದ್ದಾರೆ.

ಶುಕ್ರವಾರ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮಾದರಿ ಸಮೀಕ್ಷೆ 75ನೇ ಸುತ್ತಿನ ರಾಷ್ಟ್ರಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಈ ಸಮೀಕ್ಷೆಯನ್ನು 1950ರಲ್ಲಿ ಭಾರತ ಸರಕಾರ ಆರಂಭಿಸಿತು. ಇವರಿಂದ ರಾಷ್ಟ್ರದಲ್ಲಿನ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳು ಕಾಣ ಸಿಗುತ್ತವೆ. ಕರ್ನಾಟಕ 1963ರಿಂದ ಈ ಸಮೀಕ್ಷೆ ನಡೆಸುತ್ತಿದ್ದು, 75ನೇ ಸುತ್ತಿನ ಸಮೀಕ್ಷೆ 2017ರ ಜೂನ್ ರಿಂದ 2018 ರವರೆಗೆ ನಡೆಯಲಿದೆ ಎಂದು ಅವರು ನುಡಿದರು.

ಇದೇ ವೇಳೆ ರಾಷ್ಟ್ರೀಯ ಸಂಖ್ಯಾ ಮಾದರಿ ಸಮೀಕ್ಷೆಯ ನಿರ್ದೇಶಕ ಕೃಷ್ಣಮೂರ್ತಿ ಮಯ್ಯ ಮಾತನಾಡಿ, ಈ ಸಮೀಕ್ಷೆಯಿಂದ ದೇಶದಲ್ಲಿ ರಾಜ್ಯವಾರು ಕುಟುಂಬಗಳ ನಿರ್ವಹಣಾ ವೆಚ್ಚದ ಹಾಗೂ ಗ್ರಾಹಕ ವೆಚ್ಚ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ದೇಶದ ವಿವಿಧ ಪ್ರಾಂತ್ಯಗಳಲ್ಲಿ ವಯೋವಾರು ಮತ್ತು ಲಿಂಗವಾರು ಮರಣ ಪ್ರಮಾಣ, ಕುಟುಂಬವು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಮಾಡಿದ ಚಿಕಿತ್ಸಾ ವೆಚ್ಚ, 3ರಿಂದ 35 ವಯೋಮಾನದೊಳಗಿನವರ ಶಿಕ್ಷಣ ವ್ಯವಸ್ಥೆ, ಶಿಕ್ಷಣಕ್ಕೆ ಭರಿಸಲಾದ ಖಾಸಗಿ ವೆಚ್ಚ, ಶಿಕ್ಷಣಕ್ಕಾದ ನಿರರ್ಥಕ ವೆಚ್ಚ, ಇವುಗಳ ವಿವರಗಳನ್ನು ಈ ಸಮೀಕ್ಷೆಯಲ್ಲಿ ಚರ್ಚಿಸಲಾಗುವುದು ಎಂದರು.

ಈ ಅಂಕಿಅಂಶಗಳ ಆಧಾರದ ಮೇಲೆ ಸ್ಥಿರಪಡಿಸುವ ಸೂಚ್ಯಂಕಗಳನ್ನು ವಿವಿಧ ಯೋಜನೆ, ನೀತಿಗಳನ್ನು ರೂಪಿಸಲು ಮತ್ತು ವಿವಿಧ ಹಂತಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಬಳಸಲಾಗುವುದು. ಸಮೀಕ್ಷೆಯ ಫಲಿತಾಂಶಗಳು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳಿಗೆ ಅಲ್ಲದೆ ವಿವಿಧ ಬಗೆಯ ಬಳಕೆದಾರರು, ಸಂಶೋಧಕರು, ನೀತಿ-ನಿರೂಪಗಳಿಗೆ ಉಪಯೋಗವಾಗಲಿದೆ ಎಂದರು.

ಕಾರ್ಯಾಗಾರದಲ್ಲಿ 30 ಜಿಲ್ಲಾ ಸಂಖ್ಯಾಧಿಕಾರಿಗಳು, ಸಿಬ್ಬಂದಿ ವೃಂದದವರು ಭಾಗವಹಿಸುತ್ತಿರುವುದರಿಂದ ಸಮೀಕ್ಷೆ ಫಲಪ್ರದವಾಗುತ್ತದೆ. ರಾಜ್ಯ ಸರಕಾರದಿಂದ 596 ಮಾದರಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದರು. ಕಾರ್ಯಾಗಾರದಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆ ನಿರ್ದೇಶಕ ಕೆ.ವಿ.ಸುಬ್ರಮಣ್ಯಂ, ಜನನ ಮತ್ತು ಮರಣಗಳ ಮುಖ್ಯ ನೋಂದಣಾಧಿಕಾರಿ ಸಿ.ಕೆಂಪಯ್ಯ, ರಾಷ್ಟ್ರೀಯ ಮಾದರಿ ಸಮೀಕ್ಷೆಯ ವಿಭಾಗೀಯ ಕಚೇರಿಯ ನಿರ್ದೇಶಕರಾದ ಲೀನಾ, ರಾಜೇಶ್ವರಿ ಕಸ್ತೂರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News