ಗೋಡೆ ಕೊರೆದು ಚಿನ್ನಾಭರಣ ಕಳವು ಪ್ರಕರಣ: 2 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ವಶಕ್ಕೆ

Update: 2017-07-28 12:46 GMT

ಬೆಂಗಳೂರು, ಜು.28: ಗೋಡೆ ಕೊರೆದು ಚಿನ್ನಾಭರಣ ಅಂಗಡಿಯಲ್ಲಿ ಕಳವು ಮಾಡಿದ್ದ ಪ್ರಕರಣ ಸಂಬಂಧ ಮೂವರು ಅಂತಾರಾಜ್ಯ ಚೋರರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು, 70 ಲಕ್ಷ ರೂ. ಮೌಲ್ಯದ 2 ಕೆಜಿ ಚಿನ್ನಾಭರಣ, 20 ಕೆ.ಜಿ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಪ್ರದೀಪ್(27), ಪ್ರಫುಲ್(35), ಗೌರಂಗ್ ಮಂಡಲ್(37) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಬೇಗೂರು ಮುಖ್ಯರಸ್ತೆಯ ಪವನ್ ಜ್ಯೂವೆಲ್ಲರ್ಸ್‌ನಲ್ಲಿ ಹಿಂದೆ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದು, ಜೂ.29ರಂದು ಅಂಗಡಿಯ ಗೋಡೆ ಕೊರೆದು ಸುಮಾರು 70ಲಕ್ಷ ಮೌಲ್ಯದ 2ಕೆ.ಜಿ ಚಿನ್ನ, 20ಕೆ.ಜಿ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ.
ಕಳ್ಳತನ ನಡೆದ ನಂತರ ಆರೋಪಿಗಳು ಮನೆ ಖಾಲಿ ಮಾಡಿಕೊಂಡು ಹೋಗಿದ್ದರು. ಪೊಲೀಸರು ಅದೇ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಹಿಂದಿನ ಮನೆಯಲ್ಲಿದ್ದವರೇ ಕೃತ್ಯ ಎಸಗಿರುವ ವಿಚಾರ ಬೆಳಕಿಗೆ ಬಂದಿತ್ತು. ಬಂಧಿತರೆಲ್ಲರೂ ಉತ್ತರ ಪ್ರದೇಶ ಮೂಲದವರಾಗಿದ್ದು, ಕಳ್ಳತನದ ನಂತರ ಉತ್ತರ ಪ್ರದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು. ಸಿಸಿಟಿವಿ ಕೊಟ್ಟ ಸುಳಿವಿನ ಮೇಲೆ ಆರೋಪಿಗಳ ಜಾಡು ಹಿಡಿದ ಪೊಲೀಸರು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News