ಮುಂಗಾರು ಕ್ಷೀಣ, ಅತಂತ್ರದಲ್ಲಿ ರೈತ: ತುರ್ತು ಅಧಿವೇಶನಕ್ಕೆ ಪುಟ್ಟಣ್ಣಯ್ಯ ಒತ್ತಾಯ

Update: 2017-07-28 14:03 GMT

ಬೆಂಗಳೂರು, ಜು. 28: ಈ ವರ್ಷವೂ ಮುಂಗಾರು ಮಳೆ ಕ್ಷೀಣಿಸಿರುವುದರಿಂದ ಅತಂತ್ರಕ್ಕೆ ಸಿಲುಕಿರುವ ರೈತರ ನೆರವಿಗಾಗಿ ರಾಜ್ಯ ಸರಕಾರ ಕೂಡಲೇ ವಿಶೇಷ ತುರ್ತು ಅಧಿವೇಶನ ನಡೆಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಭೀಕರ ಬರಗಾಲಕ್ಕೆ ಸಿಲುಕಿ ತತ್ತರಿಸಿದ್ದ ರೈತರು ಇನ್ನು ಸುಧಾರಿಸುವ ಮುನ್ನವೇ ಈ ಬಾರಿ ಮುಂಗಾರು ಮಳೆಯೂ ಕೈ ಕೊಟ್ಟಿದೆ. ರಾಜ್ಯದ ಕಬಿನಿ, ಹೇಮಾವತಿ, ಭದ್ರಾ, ಕಾವೇರಿ, ಹಾರಂಗಿ ಜಲಾಶಯಗಳಲ್ಲಿ ಭಾಗಶಃ ನೀರಿಲ್ಲದೆ ರೈತರು ಅತಂತ್ರಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈ ಬಾರಿ ಶೇ.90ರಷ್ಟು ಮುಂಗಾರು ಮಳೆ ಆಗಿಲ್ಲ. ಖುಷ್ಕಿ ಭೂ ಪ್ರದೇಶವಲ್ಲದೆ ವರ್ಷಕ್ಕೆ ಮೂರು ಬೆಳೆ ಬೆಳೆಯುವ ನೀರಾವರಿ ಪ್ರದೇಶದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದೆ. ರಾಜ್ಯದ ಭತ್ತದ ಕಣಜ ಬಾಗಲಕೋಟೆಯಲ್ಲಿ ಒಂದೇ ಒಂದು ಭತ್ತ ಬಿತ್ತನೆಯಾಗಿಲ್ಲ. ಹತ್ತಿ, ರಾಗಿ, ಜೋಳ, ಕಬ್ಬು ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಬಯಲು ಸೀಮೆ ಪ್ರದೇಶಗಳಲ್ಲಿ ಐದು ವರ್ಷಗಳಿಂದ ಕಾಡುತ್ತಿರುವ ಬರಗಾಲಕ್ಕೆ ಈ ವರ್ಷವೂ ಮುಂದುವರೆಯುವ ಭೀತಿ ರೈತರಲ್ಲಿ ಕಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸರಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಕಿಡಿಕಾರಿದರು.

ಬೆಳೆ ಸಾಲ ಬದಲಾಗಿ ಜೀವನ ಭದ್ರತೆಯ ಸಾಲ ನೀತಿಯನ್ನು ಜಾರಿಗೊಳಿಸಲು ಸರಕಾರ ಚಿಂತನೆ ನಡೆಸಬೇಕು. ಸಂಕಷ್ಟಕ್ಕ್ಕೆ ಸಿಲುಕಿರುವ ರೈತರ ಸಮಸ್ಯೆ ಬಗೆಹರಿಸಲು ವಿಶೇಷ ತುರ್ತು ಅಧಿವೇಶನ ಕರೆದು, ಮುಂದೆ ಸಂಭವಿಸುವ ರೈತರ ಆತ್ಮಹತ್ಯೆಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಮಳೆಗಾಲದಲ್ಲೇ ಕಾಡುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಈಗಾಗಲೇ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಇನ್ನೂ ಸರಕಾರ ಕೈ ಕಟ್ಟಿ ಕೂರಬಾರದು. ಕೂಡಲೆ ಜಾನುವಾರಗಳಿಗೆ ಮೇವು ಬೆಳೆಯಲು ನೀರಾವರಿ ಪ್ರದೇಶದ ರೈತರಿಗೆ ಸಬ್ಸಿಡಿ ನೀಡುವ ಮೂಲಕ ಉತ್ತೇಜಿಸಬೇಕು ಎಂದು ಹೇಳಿದರು.

ಬೆಂಗಳೂರು ನಗರ ಪ್ರದೇಶದಲ್ಲಿ ಬಡವರಿಗೆ ಕಡಿಮೆ ಬೆಲೆಯಲ್ಲಿ ಊಟ ತಿಂಡಿ ನೀಡಲು ತೆರೆಯಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೂಡಲೆ ಗಂಜಿ ಕೇಂದ್ರಗಳನ್ನು ತೆರೆಯಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದುಬಾರಿ ವೆಚ್ಚದಲ್ಲಿ ದಸರಾ ಹಬ್ಬವನ್ನು ಆಚರಿಸುವ ಬದಲು ಸರಳವಾಗಿ ಆಚರಿಸಬೇಕು. ದಸರಾ ಆಚರಣೆಗೆ ಮೀಸಲಿಟ್ಟಿರುವ ಅನುದಾನವನ್ನು ರೈತರ ರಕ್ಷಣೆಗೆ ವಿನಿಯೋಗಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.

‘ರೈತ ಧರ್ಮ’ಕ್ಕೆ ಸೇರಿ

ರಾಜ್ಯದಲ್ಲಿ ಮಠಮಾನ್ಯಗಳು ಧರ್ಮದ ಹೆಸರಿನಲ್ಲಿ ಹಗ್ಗಜಗ್ಗಾಟ ಮಾಡುವ ಬದಲು, ರೈತರ ಸಂಕಷ್ಟಕ್ಕೆ ನೆರವಾಗಬೇಕು. ಧರ್ಮದ ಘರ್ಷಣೆ ಬಿಟ್ಟು, ರೈತರೆಂಬ ಧರ್ಮಕ್ಕೆ ಸೇರಿ. ಭೂಮಿಯೇ ನಮಗೆ ಮಠ. ಇದಕ್ಕೆ ಯಾವ ಗುರುವೂ ಇಲ್ಲ.
-ಕೆ..ಎಸ್.ಪುಟ್ಟಣ್ಣಯ್ಯ ರೈತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News