ಜೇವರ್ಗಿಯಲ್ಲಿ ಧರಂ ಅಂತ್ಯ ಸಂಸ್ಕಾರ

Update: 2017-07-28 14:23 GMT

ಕಲಬುರಗಿ, ಜು. 28: ತೀವ್ರ ಹೃದಯಾಘಾತದಿಂದ ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವನ್ನು ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಶುಕ್ರವಾರ ಸಂಜೆ ರಜಪೂತ ಸಮುದಾಯದ ಸಂಪ್ರದಾಯದಂತೆ ಧರಂ ಸಿಂಗ್ ಅವರ ಹಿರಿಯ ಪತ್ರ, ಮೇಲ್ಮನೆ ಸದಸ್ಯ ವಿಜಯ್ ಸಿಂಗ್ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಸಕಲ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಎಐಸಿಸಿ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಸೇರಿ ಸಂಪುಟ ಸಚಿವರು, ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಹರಿದು ಬಂದ ಜನಸಾಗರ: ಅಗಲಿದ ತಮ್ಮ ನೆಚ್ಚಿನ ಸಾಹೇಬ್ರ ಅಂತಿಮ ದರ್ಶನ ಪಡೆಯಲು ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸಾಗರವೇ ಹರಿದು ಬಂದಿತ್ತು.

ಮಾತ್ರವಲ್ಲ, ಕಲಬುರಗಿ ನಗರ, ಜೇವರ್ಗಿ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ತಮ್ಮ ನಾಯಕನ ಗೌರವಾರ್ಥ ಅಂಗಡಿ-ಮುಗ್ಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಅಂತಿಮ ದರ್ಶನ, ಅಂತ್ಯ ಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಧರಂ ಸಿಂಗ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಹುಟ್ಟೂರಾದ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಅಂತಿಮ ದರ್ಶನ ಪಡೆಯಲು ಅಪಾರ ಅಭಿಮಾನಿಗಳು, ಬೆಂಬಲಿಗರು, ವಿವಿಧ ಪಕ್ಷಗಳ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿತ್ತು.

ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಬೆಳಗ್ಗೆ 12ಗಂಟೆ ವರೆಗೆ ಇಲ್ಲಿನ ಎಂ.ವಿ.ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕ ಇಡಲಾಗಿದ್ದು, ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದರು.

ಆ ಬಳಿಕ ಪಾರ್ಥಿವ ಶರೀರವನ್ನು ಧರಂ ಸಿಂಗ್ ಅವರ ಹುಟ್ಟೂರಾದ ನೆಲೋಗಿಗೆ ಕೊಂಡೊಯ್ಯಲಾಯಿತು. ನೆಲೋಗಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಅಂತಿಮ ಸಂಸ್ಕಾರ ನಡೆಯುವ ಸ್ಥಳದಲ್ಲಿ ಪಾಲ್ಗೊಂಡಿದ್ದರು. ಮನೆಯ ಹಿರಿಯಣ್ಣನೊಬ್ಬರನ್ನು ಕಳೆದಕೊಂಡಂತೆ ಇಡೀ ಗ್ರಾಮವೇ ಧರಂಸಿಂಗ್ ಅವರ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾದಂತೆ ಕಂಡುಬಂತು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸಚಿವರಾದ ಎಚ್.ಕೆ. ಪಾಟೀಲ್, ಪ್ರಿಯಾಂಕ್ ಖರ್ಗೆ, ಆಂಜನೇಯ, ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ ಸೇರಿದಂತೆ ಸಚಿವರು, ಶಾಸಕರು, ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News