'ಗುಂಪು ಹತ್ಯೆ' ಸಂತ್ರಸ್ಥ ಕುಟುಂಬಗಳನ್ನು ಭೇಟಿಮಾಡಿದ ಪಿಎಫ್‌ಐ ತಂಡ

Update: 2017-07-28 14:51 GMT

ಬೆಂಗಳೂರು, ಜು.27: ತಥಾಕಥಿಕ ಗೋರಕ್ಷಕರ ಅನಿಯಂತ್ರಿತ ಗುಂಪಿನ ವಿವಿಧ ದಾಳಿಗಳಲ್ಲಿ ಹತ್ಯೆಗೀಡಾದ ಮತ್ತು ಗಂಭೀರ ಗಾಯಗೊಂಡವರ ಕುಟುಂಬಸ್ಥರ ಭೇಟಿಗಾಗಿ ಜಾರ್ಖಂಡ್, ಹರಿಯಾಣ, ಉತ್ತರ ಪ್ರದೇಶದ ವಿವಿಧ ಪ್ರದೇಶಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಇ.ಅಬೂಬಕರ್ ನೇತತ್ವದಲ್ಲಿ ರಾಷ್ಟ್ರೀಯ ನಾಯಕರ ತಂಡವು ಪ್ರವಾಸ ಕೈಗೊಂಡಿತ್ತು.

ಈ ಬಗ್ಗೆ ಪಿಎಫ್ಐ ನೀಡಿದ ಪ್ರಕಟಣೆ ಹೀಗಿದೆ:

ಜು.17ರಂದು ತಂಡವು ಜಮ್ಶೆಡ್‌ಪುರ ಸಮೀಪದ ಹಲ್‌ದೀಪುರ್ ಗ್ರಾಮದಲ್ಲಿ ಶೇಖ್ ಹಲೀಮ್ ಎಂಬಾತನ ಮನೆಗೆ ಭೇಟಿ ನೀಡಿತು. ಹಲೀಮ್ ಹಾಗೂ ಆತನ ಮೂವರು ಸ್ನೇಹಿತರನ್ನು ಮಕ್ಕಳ ಅಪಹರಣದ ಆರೋಪ ಹೊರಿಸಿ 5 ಸಾವಿರಕ್ಕಿಂತಲೂ ಹೆಚ್ಚು ಮಂದಿಯಿದ್ದ ಗುಂಪು ನಿರ್ದಯವಾಗಿ ಥಳಿಸಿ ಕೊಂದು ಹಾಕಿತ್ತು.

ಜು.18ರಂದು ರಾಂಚಿಯ ಆರ್‌ಐಎಂಎಸ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿದ್ದ ಉಸ್ಮಾನ್ ಅನ್ಸಾರಿಯನ್ನು ಭೇಟಿಯಾಯಿತು. ಅಲ್ಲಿ ಅವರ ಶುಶ್ರೂಷೆಗಾಗಿ ಕೇವಲ ಸೊಸೆ ಮಾತ್ರ ಇದ್ದರು. ತನ್ನ ಮಾವನನ್ನು ಗೋರಕ್ಷಕರ ಗುಂಪು ಎಳೆದೊಯ್ದು ಥಳಿಸಿದ ಘಟನೆಯ ಕಣ್ಣಾರೆ ಕಂಡ ಭಯಾನಕ ಚಿತ್ರಣವನ್ನು ಆಕೆ ಈ ವೇಳೆ ನೆನಪಿಸಿಕೊಂಡರು. ಗುಂಪು ಇವರನ್ನು ಮೊದಲೇ ಸಿದ್ಧಪಡಿಸಿದ್ದ ಚಿತೆಯಲ್ಲಿ ಸುಡುವುದರಲ್ಲಿತ್ತು. ಆದರೆ ಅವರನ್ನು ಅದೃಷ್ಟವು ಬದುಕಿಸಿತ್ತು.

ರಾಂಚಿಯಿಂದ 70 ಕಿ.ಮೀ.ದೂರವಿರುವ ರಾಮ್‌ಗಢ್‌ನಲ್ಲಿರುವ ಅಲೀಮುದ್ದೀನ್‌ರವರ ಮನೆಗೆ ತಂಡ ತಲುಪಿತು. ಅಲೀಮುದ್ದೀನ್‌ರನ್ನು ಈದ್‌ನ ಮುನ್ನಾ ದಿನ ದನ ಸಾಗಾಟದ ಆರೋಪ ಹೊರಿಸಿ ಕ್ರೂರವಾಗಿ ಗುಂಪು ಹತ್ಯೆ ನಡೆಸಲಾಗಿತ್ತು. ಜು.19ರಂದು ತಂಡವು ದಿಲ್ಲಿ ತಲುಪಿತು. ಅಲ್ಲಿಂದ ಹರಿಯಾಣಕ್ಕೆ ತೆರಳಿತು. ಹರಿಯಾಣ ತಲುಪಿದ ಬಳಿಕ ತಂಡವು ಹೊಸದಿಲ್ಲಿಯಿಂದ ಸುಮಾರು 70 ಕಿ.ಮೀ.ದೂರದಲ್ಲಿರುವ ನೂಹ್ ಪ್ರದೇಶದಲ್ಲಿ ಪಹ್ಲೂಖಾನ್‌ನ ಕುಟುಂಬಸ್ಥರನ್ನು ಭೇಟಿಯಾಯಿತು. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಊರಿನ ಮಾರುಕಟ್ಟೆಯಲ್ಲಿ ನೀಡಲಾದ ಜಾನುವಾರು ಖರೀದಿಸುವ ದಾಖಲೆಯನ್ನು ಅವರ ಕಣ್ಣ ಮುಂದೆಯೆ ಹರಿದು ಹಾಕಿದ್ದರು ಮತ್ತು ಅವರ ತಂದೆಯನ್ನು ನಿರ್ದಯವಾಗಿ ಹೇಗೆ ಹತ್ಯೆಗೈದಿದ್ದರು ಎಂಬುದನ್ನು ಪಹ್ಲೂ ಖಾನ್‌ರ ಪುತ್ರರಾದ ಇರ್ಶಾದ್ ಮತ್ತು ಆರಿಫ್ ತಿಳಿಸಿದರು.


ದಿಲ್ಲಿಯಿಂದ ಹಿಂದಿರುಗುವ ವೇಳೆ ತಂಡವು ಹಾಫಿಝ್ ಜುನೈದ್ ಮನೆಗೂ ಭೇಟಿ ನೀಡಿ ಆತನ ತಂದೆ, ಸಹೋದರರೊಂದಿಗೆ ಮಾತುಕತೆ ನಡೆಸಿದರು. ಹಾಫಿಝ್ ಜುನೈದ್ ಈದ್‌ನ ಸಿದ್ಧತೆಗಾಗಿ ರೈಲಿನ ಮೂಲಕ ದಿಲ್ಲಿಗೆ ತೆರಳಿದ್ದ. ಮನೆಗೆ ಹಿಂದಿರುಗುವ ವೇಳೆ ಕಪಟ ರಾಷ್ಟ್ರೀಯವಾದದ ಅಮಲಿನಲ್ಲಿದ್ದ ಅನಿಯಂತ್ರಿತ ಗುಂಪು ಆತನನ್ನು ಮನೆಗೆ ಹಿಂದಿರುಗಲು ಬಿಡಲಿಲ್ಲ.

ಮುಸ್ಲಿಮನಂತೆ ಕಾಣುವ ವ್ಯಕ್ತಿಯನ್ನು ಗುರಿಪಡಿಸುವುದೇ ಆ ಗುಂಪಿನ ನೈಜ ಉದ್ದೇಶವಾಗಿತ್ತು. ಜುನೈದ್‌ನ ಶರೀರದಲ್ಲಿ ಮೂವತ್ತಕ್ಕೂ ಅಧಿಕ ಬಾರಿ ಚಾಕುನಿಂದ ತಿವಿಯಲಾಗಿದೆ. ಬಳಿಕ ರೈಲಿನಿಂದ ಹೊರಗೆಸೆಯಲಾಯಿತು. ಈ ದುರ್ಘಟನೆಯು ಈದ್‌ಗಿಂತ ಕೇವಲ ಎರಡು ದಿನ ಮೊದಲು ನಡೆದಿತ್ತು.
ಜು.20ರಂದು ಪ್ರತಿನಿಧಿಗಳ ತಂಡವು ದಾರುಲ್ ಉಲೂಮ್ ದೇವ್‌ಬಂದ್‌ಗೆ ಸಮೀಪರುವ ಶಬ್ಬೀರ್‌ಪುರ್ ಊರಿಗೆ ತಲುಪಿತು. ಅಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರ ಪ್ರತಿಮೆಯನ್ನು ಅಳವಡಿಸುವ ವೇಳೆ ಠಾಕೂರ್(ಮೇಲ್ಜಾತಿ)ಗಳಿಂದ ದಾಳಿಗೊಳಗಾದ ಊರಿನ ಸಂತ್ರಸ್ತ ದಲಿತರನ್ನು ಭೇಟಿಯಾದರು.
ಪ್ರತಿಮೆ ಅಳವಡಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಮೇಲ್ಜಾತಿಯ ಯುವಕರು ಕೈಯಲ್ಲಿ ತಲವಾರು ಹಿಡಿದು ಅಸಹಾಯಕ ಮತ್ತು ಸಿದ್ಧರಿಲ್ಲದ ಊರ ಮಂದಿಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದರು.

ಇದರ ಪರಿಣಾಮವಾಗಿ ಅನೇಕ ಮಂದಿ ಗಂಭೀರ ಗಾಯಗೊಂಡರು ಮತ್ತು ಆಸ್ತಿಪಾಸ್ತಿ ನಾಶವಾಯಿತು. ದಲಿತ ಸಮುದಾಯದ ಊರಿನ ಮುಖ್ಯಸ್ಥ ಮತ್ತು ಆತನ ಕಿರಿಯ ಪುತ್ರ ಇನ್ನೂ ಕೂಡ ಎರಡು ತಿಂಗಳಿನಿಂದ ಜೈಲಿನಲ್ಲಿ ಬಂಧನದಲ್ಲಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News