ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿರುವ ಸಿಎಂ: ಈಶ್ವರಪ್ಪ

Update: 2017-07-28 14:56 GMT

ಬೆಂಗಳೂರು, ಜು.28: ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ-ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸಿ, ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.

ಶುಕ್ರವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶತಮಾನಗಳಿಂದ ನಮ್ಮ ದೇಶದಲ್ಲಿ ಧರ್ಮ ಕಾಪಾಡಲು ಕನಕದಾಸ, ಬಸವೇಶ್ವರ, ಶಂಕರಾಚಾರ್ಯ, ಅಂಬೇಡ್ಕರ್ ಸೇರಿದಂತೆ ಅನೇಕ ಮಹಾಪುರುಷರು ಬಂದು ಹೋಗಿದ್ದಾರೆ. ಆದರೆ, ಸಿದ್ದರಾಮಯ್ಯ ಜಾತಿ ಒಡೆಯುವ ಮಹಾಪುರಷ ಆಗಿದ್ದಾರೆ ಎಂದು ಕಿಡಿಗಾರಿದರು.

ನಾಳೆ ಕುರುಬರು, ದಲಿತರು, ತಿಗಳ ಸಮಾಜದವರು ಪ್ರತ್ಯೇಕ ಧರ್ಮ ಮಾಡಿ ಎಂದು ಕೇಳಿದರೆ ಹೇಗೆ. ಜಾತಿಗೆ ಒಂದು ಧರ್ಮ ಬೇಕು ಎಂದು ಹೊರಟರೆ, ಈ ಸಮಾಜದ ಪರಿಸ್ಥಿತಿ ಏನಾಗುತ್ತದೆ. ಧರ್ಮದ ಬಗ್ಗೆ ಚರ್ಚೆ ಮಾಡುವ ಕೆಲಸ ಸರಕಾರದ್ದಲ್ಲ. ಅದಕ್ಕಾಗಿ, ಧಾರ್ಮಿಕ ನಾಯಕರು, ಸಾಧು, ಸಂತರು ಇದ್ದಾರೆ ಎಂದು ಅವರು ಹೇಳಿದರು.

ರಾಜ್ಯದ ಜನತೆ ಐದು ವರ್ಷ ಅಧಿಕಾರ ಕೊಟ್ಟಿರುವುದು ರೈತರು, ಜನರ ಹಿತ ಕಾಪಾಡಿ, ಅಭಿವೃದ್ಧಿ ಮಾಡಲು. ಆದರೆ, ಇವರು ಜಾತಿ ಒಡೆದು, ಕರ್ನಾಟಕಕ್ಕೆ ಪ್ರತ್ಯೇಕ ಬಾವುಟ ತರಲು ಹೊರಟಿದ್ದಾರೆ. ವೀರಶೈವ ಲಿಂಗಾಯತ ಸಮಾಜಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಿಸಲು ಜನಾಭಿಪ್ರಾಯ ಸಂಗ್ರಹಿಸಲು ಐವರು ಸಚಿವರನ್ನು ನೇಮಿಸಿರುವುದು ಖಂಡನೀಯ ಎಂದು ಅವರು ತಿಳಿಸಿದರು.

180 ಕೋಟಿ ರೂ.ಗಳನ್ನು ಖರ್ಚು ಮಾಡಿ ಜಾತಿವಾರು ಜನಗಣತಿ ಮಾಡಿಸಿದೆ. ಆ ವರದಿಯನ್ನು ಬಿಡುಗಡೆ ಮಾಡಲು ಯಾಕೆ ಮೀನಾಮೇಷ ಎಣಿಸುತ್ತಿದೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಕರೆಸಿಕೊಳ್ಳುತ್ತಿರುವ ಸಿದ್ದರಾಮಯ್ಯ, ಅಹಿಂದ ವರ್ಗಗಳ ಮೊಸಳೆ ಕಣ್ಣೀರು ಸುರಿಸುವುದು ಬೇಡ ಎಂದು ಈಶ್ವರಪ್ಪ ಹೇಳಿದರು.

ಅಂಬೇಡ್ಕರ್ ಸಮಾವೇಶವು ನೇರವಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ಉದ್ಘಾಟನೆಯಾಗಿತ್ತು. ಬಿಜೆಪಿ, ನರೇಂದ್ರಮೋದಿ, ಯಡಿಯೂರಪ್ಪರನ್ನು ಟೀಕಿಸಲು ಈ ಸಮಾವೇಶ ಬಳಸಿಕೊಳ್ಳಲಾಗಿತ್ತು. ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಅಂಬೇಡ್ಕರ್ ಹೆಸರನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದರು.

ವಿಚಾರ ಸಂಕಿರಣ : ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸುವ ಸಂಬಂಧ ಜಾರಿಗೆ ತರಲು ಮುಂದಾಗಿರುವ ತಿದ್ದುಪಡಿ ವಿಧೇಯಕದಿಂದ ಹಿಂದುಳಿದ ವರ್ಗಗಳಿಗೆ ಆಗುವ ಲಾಭದ ಕುರಿತು ಎಲ್ಲರಿಗೂ ಮಾಹಿತಿ ಒದಗಿಸಲು ನಾಳೆ ಬೆಳಗ್ಗೆ 10.30ಕ್ಕೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಈಶ್ವರಪ್ಪ ಹೇಳಿದರು. ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಸಚಿವ ಥಾವರ್‌ಚಂದ್ ಗೆಹ್ಲೋಟ್ ಈ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

‘ಕೊಲೆಗಡುಕ ಮುಸ್ಲಿಮರು’

ಕೋಮುಗಲಭೆಗಳು ನಡೆದಾಗ ‘ಕೊಲೆಗಡುಕ ಮುಸ್ಲಿಮರು’ ಹಿಂದೂಗಳ ಕಗ್ಗೊಲೆ ಮಾಡಿದಾಗ, ಅವರನ್ನು ಹಿಡಿದು ನಾವು ಯಾವುದೆ ಜಾತಿ, ಧರ್ಮದ ಪರವಾಗಿಲ್ಲ. ನ್ಯಾಯದ ಪರವಾಗಿದ್ದೇವೆ ಎಂಬ ಸಂದೇಶವನ್ನು ರಾಜ್ಯ ಸರಕಾರ ಸಾರಬೇಕಿತ್ತು. ಆದರೆ, ಅದನ್ನು ಮಾಡದೆ ಆರೆಸೆಸ್ಸ್, ಬಿಜೆಪಿಯನ್ನು ಟೀಕಿಸುವುದನ್ನೆ ಪ್ರವೃತ್ತಿ ಮಾಡಿಕೊಂಡಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News