×
Ad

ಸ್ವಾರ್ಥಕ್ಕಾಗಿ ಅಧಿಕಾರ ಬಳಕೆ: ವೀರಭದ್ರ ಚನ್ನಮಲ್ಲ ಸ್ವಾಮೀಜಿ

Update: 2017-07-29 18:28 IST

ಬೆಂಗಳೂರು, ಜು.29: ಇತ್ತೀಚಿನ ದಿನಗಳಲ್ಲಿ ಐಎಎಸ್, ಕೆಎಎಸ್ ಸ್ಥಾನಗಳನ್ನು ತಮ್ಮ ಅನುಕೂಲಕ್ಕಾಗಿ, ವೈಯಕ್ತಿಕ ಬೆಳವಣಿಗೆಗಾಗಿ ಬಳಸಿಕೊಳ್ಳುವವರ ಸಂಖ್ಯೆ ಅಧಿಕವಾಗುತ್ತಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ಅಂಧರ ವಿಮೋಚನಾ ವೇದಿಕೆ ವತಿಯಿಂದ ಆಯೋಜಿಸಿದ್ದ ಯುಪಿಎಸ್‌ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ಸಾಧನೆ ಮಾಡಿದ ಅಂಧ ಸಾಧಕ ‘ಕೆಂಪ ಹೊನ್ನಯ್ಯ’ಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಐಎಎಸ್, ಕೆೆಎಎಸ್ ಆಗಬೇಕೆಂದು ಬಯಸುವ ಬಹುತೇಕರು ತಮ್ಮ ಸ್ವಾರ್ಥಕ್ಕಾಗಿಯೇ ಆಲೋಚನೆ ಮಾಡುತ್ತಾರೆ. ಬಡವರ, ಅಸಹಾಯಕರ, ನಿರ್ಲಕ್ಷಕ್ಕೆ ಒಳಗಾದವರ, ದೀನ-ದಲಿತರ ಪರವಾಗಿ ಅಥವಾ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂಬ ಬಯಕೆ ಇರುವುದಿಲ್ಲ. ತಮಗಾಗಿ ಅಲ್ಲದೆ, ಸಮಾಜಕ್ಕಾಗಿ ತಮ್ಮ ಅಧಿಕಾರವನ್ನು ಬಳಸಿಕೊಂಡು ಕೆಲಸ ಮಾಡುವವರು ಬೆರಳೆಣಿಕೆಯಷ್ಟು ಜನರು ಮಾತ್ರ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಾಧಿಸುವ ಛಲವಿದ್ದರೆ ಏನನ್ನು ಬೇಕಾದರೂ ಸಾಧನೆ ಮಾಡಬಹುದು. ಛಲವಿದ್ದಾಗ ಸಾಧನೆಗೆ ಬಡತನ, ಹಸಿವು, ನೋವು, ಕಷ್ಟ ಏನೂ ಅಡ್ಡ ಬರುವುದಿಲ್ಲ. ಆದರೆ, ಇಂದು ಅಪಾರ ಪ್ರಮಾಣದಲ್ಲಿ ತಂತ್ರಜ್ಞಾನ, ವಿಜ್ಞಾನ ಬೆಳವಣಿಗೆ ಕಂಡರೂ ಸಾಧಕರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದಿನ ದಿನಗಳಲ್ಲಿ ಕತ್ತಲಿನಲ್ಲಿ ಓದಿದರೂ ಬಹಳಷ್ಟು ಸಾಧಕರನ್ನು ಕಾಣುತ್ತಿದ್ದೆವು ಎಂದು ತಿಳಿಸಿದರು. ಇಂದಿನ ಮಕ್ಕಳು ಸಣ್ಣದಾದ, ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ಹೊಡೆದರು ಎಂದು ಶಿಕ್ಷಕರ ಮೇಲೆ ಕೇಸು ಹಾಕುತ್ತಿದ್ದಾರೆ ಎಂದ ಅವರು, ಹೊರಗಣ್ಣಿನಿಂದ ವಂಚಿತರಾದವರಿಗೆ, ಒಳಗಣ್ಣಿನ ಶಕ್ತಿ ಇರುತ್ತದೆ. ಅವರು ಮಾನವ ಜನಾಂಗದ ವಿಕಾಸಕ್ಕೆ ಕಾರಣವಾಗುತ್ತಾರೆ. ಪಂಚಾಕ್ಷರಿ, ಪುಟ್ಟರಾಜು ಗವಾಯಿಯೇ ಇದಕ್ಕೆ ಸಾಕ್ಷಿ. ಅವರು ದೈಹಿಕ ನೂನ್ಯತೆಯನ್ನು ಮೆಟ್ಟಿ ನಿಂತವರು ಎಂದು ಶ್ಲಾಘಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ ಮಾತನಾಡಿ, ವಿಕಲಚೇತನರಿಗಾಗಿ ಗ್ರಂಥಾಲಯ ವಿಶೇಷ ಸೌಲಭ್ಯವನ್ನು ಒದಗಿಸುತ್ತಿದೆ. ಕೇಂದ್ರ ಗ್ರಂಥಾಲಯದಲ್ಲಿ 896 ಬ್ರೈನ್ ಲಿಪಿ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿ ಧ್ವನಿ ಸುರಳಿ ಮುದ್ರಿಕೆಯನ್ನು ಮಾಡಿಸಿದ್ದೇವೆ. ವಿಶೇಷ ಚೇತನರು ಬರೆಯುವ ಪುಸ್ತಕ, ಲೇಖನಗಳನ್ನು ಗ್ರಂಥಾಲಯ ಖರೀದಿಸಲು ಸದಾ ಸಿದ್ಧ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನುಬಳಿಗಾರ್ ಮಾತನಾಡಿ, ಮುಂದಿನ ವರ್ಷ ಮೈಸೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಚೇತನರಿಗೆ ಕವಿಗೋಷ್ಠಿ, ವಿಚಾರ ಮಂಡನೆಯಲ್ಲಿ ವಿಶೇಷವಾದ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ, ಮುಂದಿನ ದಿನಗಳಲ್ಲಿ ವಿಶೇಷ ಚೇತನರಿಗಾಗಿ ಕಸಾಪದಿಂದ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಧಕ ಕೆಂಪಹೊನ್ನಯ್ಯ, ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಡಿಎಸ್‌ಎಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಗವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News