ಒಕ್ಕೂಟ ವ್ಯವಸ್ಥೆಯಲ್ಲಿ ಸ್ಥಳೀಯ ಭಾಷೆಗಳ ಪಾತ್ರ ಮಹತ್ವವಾದುದು: ನಾರಾಯಣಗೌಡ
ಬೆಂಗಳೂರು, ಜು.29: ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಉಳಿಯಬೇಕಾದರೆ ಸ್ಥಳೀಯ ಭಾಷೆಗಳು ಉಳಿಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ಶನಿವಾರ ನಗರದ ನಯನ ಸಭಾಂಗಣದಲ್ಲಿ ದಶಮುಖ ಪತ್ರಿಕೆ 4ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಸಂವಿಧಾನದಲ್ಲಿ ಉಲ್ಲೇಖಿಸಿರುವ 22 ಅಧಿಕೃತ ಭಾಷೆಗಳಲ್ಲಿ ಹಿಂದಿ ಒಂದಾಗಿದೆ. ಆದರೆ, ಅದನ್ನೇ ರಾಷ್ಟ್ರ ಭಾಷೆ ಎಂದು ಎಲ್ಲ ರಾಜ್ಯಗಳ ಮೇಲೆ ಹೇರಲು ಮುಂದಾಗಿರುವುದು ಸರಿಯಲ್ಲ ಎಂದರು. ಹಿಂದಿ ಭಾಷೆಗೆ ವಿಶೇಷವಾದ ಸಂವಿಧಾನದ ಬದ್ಧ ಸ್ಥಾನಮಾನವಿಲ್ಲ. ಆದರೆ, ದೇಶದಲ್ಲಿ ಹೆಚ್ಚಾಗಿ ಹಿಂದಿ ಭಾಷಿಕರಿದ್ದಾರೆ ಎಂಬ ನೆಪವೊಡ್ಡಿ, ಅದನ್ನು ಹೇರಿಕೆ ಮಾಡಲು ಹೊರಟಿದ್ದಾರೆ. ನಮ್ಮದು ಹಿಂದಿ ಭಾಷೆ ಹೇರಿಕೆ ವಿರುದ್ಧ ಹೋರಾಟ ಹೊರತು, ಹಿಂದಿ ಭಾಷೆಯ ವಿರುದ್ಧವಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಬೇಕು. ಹೀಗಾಗಿ, ದೇಶದ ಹಿಂದಿಯೇತರ ರಾಜ್ಯಗಳ ಮೇಲೆ ಅನಗತ್ಯವಾಗಿ ಹಿಂದಿ ಹೇರಿಕೆಯ ದಬ್ಬಾಳಿಕೆಯನ್ನು ನಾವು ವಿರೋಧ ಮಾಡುತ್ತೇವೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ಪತ್ರಿಕೆ ನಡೆಸುವ ಕೆಲಸ ಕಷ್ಟಕರವಾದುದ್ದು, ಸತ್ಯವನ್ನು ಮರೆಮಾಚದೆ, ಲೇಖನಿಯನ್ನು ನೇರವಾಗಿ ಯಾರಿಗೂ ಮಾರಾಟ ಮಾಡಿಕೊಳ್ಳದೇ ಸ್ಪಷ್ಟ ನಿಲುವುನೊಂದಿಗೆ ಓದುಗರಿಗೆ ನೀಡಬೇಕು. ನೋವಿನಲ್ಲಿಯೂ ಗೆಲ್ಲುವ ಛಲ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಾಹೀರಾತು ನೀಡುತ್ತಿದೆ ಎಂದು ಸರಕಾರ ಮಾಡುವುದೆಲ್ಲ ಸರಿ ಎಂದು ಅಥವಾ ಜಾಹೀರಾತು ನೀಡಲಿಲ್ಲ ಎಂದು ತೆಗಳುವುದು ಸರಿಯಾದ ಬೆಳವಣಿಗೆಯಲ್ಲ ಎಂದ ಅವರು, ಪತ್ರಿಕಾ ಸಂಪಾದಕರಿಗೆ ಅಖಂಡ ಭಾರತದ ಇತಿಹಾಸದ ಅರಿವು ಇರಬೇಕು. ಒಳ್ಳೆಯದನ್ನು ಗುರುತಿಸಿ ಬೆಳೆಸಬೇಕು. ಸ್ವಾಭಿಮಾನವನ್ನು ಎಲ್ಲಿಯೂ ಮಾರಾಟಕ್ಕಿಡಬಾರದು ಎಂದು ಹೇಳಿದರು.
ಶಾಸಕ ಸತೀಶ್ ರೆಡ್ಡಿ ಮಾತನಾಡಿ, ರಾಜ್ಯದಲ್ಲಿರುವ ಕೆಲವು ಬಿಹಾರ, ಉತ್ತರ ಪ್ರದೇಶದ ವಲಸಿಗರಿಗೆ ಕಾನೂನಿನ ಭಯ ಇಲ್ಲವಾಗಿದೆ. ಕನ್ನಡಿಗರು ಎಲ್ಲರನ್ನು ನಮ್ಮವರೆಂದು ಭಾವಿಸುತ್ತಾರೆ. ಆದರೆ, ಇದನ್ನೆ ಅವರು ದುರ್ಬಳಕ್ಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಚಲನಚಿತ್ರ ಕಲಾವಿದ ಎಸ್.ಶಿವರಾಂ, ಸಾಹಿತಿ ಪ್ರೊ.ದೊಡ್ಡರಂಗೇಗೌಡ, ಶಾಸಕ ಎಂ.ಸತೀಶ್ ರೆಡ್ಡಿ ಗೆ ‘ಪ್ರಜಾ ಸೇವಾಭೂಷಣ ಪ್ರಶಸ್ತಿ’ ಹಾಗೂ ಪಾಲಿಕೆ ಸದಸ್ಯೆ ಶೋಭಾ ಮುನಿರಾಂ, ಎಚ್.ಡಿ.ರಾಜೇಶ್, ಗೋಪಾಲರೆಡ್ಡಿ, ಪ್ರೇಮಸಾಗರ್, ಟಿ.ಟಿ.ವೆಂಕಟೇಶ್ ಗೆ ‘ದಶಮುಖ ಸಾಮಾಜಿಕ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಸಂತೋಷಭಾರತಿ ಸ್ವಾಮೀಜಿ, ಒಕ್ಕಲಿಗರ ಮಹಾವೇದಿಕೆ ಅಧ್ಯಕ್ಷ ವೈ.ಡಿ.ರಶಂಕರ್, ದಶಮುಖ ಪತ್ರಿಕೆ ಸಂಪಾದಕ ಹಾಗೂ ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ಹೊನಕೆರೆ ಕೆ.ಬೊಮ್ಮೆಗೌಡ ಉಪಸ್ಥಿತರಿದ್ದರು.