ಅರಮನೆ ಮೈದಾನದಲ್ಲಿ ಕೌಂಟರ್‌ಗಳ ಸ್ಥಾಪನೆ
ಬೆಂಗಳೂರು, ಜು.29: ಸಂಬಳ ಹಾಗೂ ಪಿಂಚಣಿ ಪಡೆಯುವ ತೆರಿಗೆದಾರರು ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಆದಾಯ ತೆರಿಗೆ ಇಲಾಖೆಯು ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸ್ಥಾಪಿಸಿರುವ ಕೌಂಟರ್‌ಗಳನ್ನು ಶನಿವಾರ ಆದಾಯ ತೆರಿಗೆ ಇಲಾಖೆ(ಅಂತಾರಾಷ್ಟ್ರೀಯ ತೆರಿಗೆ)ಯ ಮುಖ್ಯ ಆಯುಕ್ತ ಅಶೋಕ್ ಕುಮಾರ್ ಸಿನ್ಹಾ ಉದ್ಘಾಟಿಸಿದರು.
ಜು.29 ರಿಂದ 31ರವರೆಗೆ ಒಟ್ಟು 106 ಕೌಂಟರ್‌ಗಳು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತವೆ. ತೆರಿಗೆ ಪಾವತಿ ಮಾಡುವುದರಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ, ಇಲ್ಲಿಗೆ ಬಂದು ಅವುಗಳನ್ನು ಇಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಭೌತಿಕ ಹಾಗೂ ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡಲು ಅಗತ್ಯ ಮಾರ್ಗದರ್ಶನವನ್ನು ಆದಾಯ ತೆರಿಗೆ ಇಲಾಖೆ ನೀಡಲಿದೆ. ಹೆಚ್ಚಿನ ಪ್ರಮಾಣದಲ್ಲಿ ಆನ್‌ಲೈನ್ ಮೂಲಕವೆ ತೆರಿಗೆ ಪಾವತಿಸುವಂತೆ ಜನರನ್ನು ಪ್ರೋತ್ಸಾಹಿಸುವ ಕೆಲಸವನ್ನು ಆದಾಯ ತೆರಿಗೆ ಇಲಾಖೆ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಕೆ.ಮೇಘನಾಥ್ ಚೌವಾಣ್ ಮಾತನಾಡಿ, ಕೇಂದ್ರ, ರಾಜ್ಯ ಸರಕಾರಿ ನೌಕರರು ಹಾಗೂ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರು, ಪಿಂಚಣಿ ಪಡೆಯುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಬೇಕು ಎಂದರು.
ಪ್ರತಿವರ್ಷ ಜುಲೈ ತಿಂಗಳಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಇಲಾಖೆ ಆಯೋಜನೆ ಮಾಡುತ್ತದೆ. ಕಳೆದ ವರ್ಷ ಸುಮಾರು 15 ಸಾವಿರ ಮಂದಿ ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆದಾಯ ತೆರಿಗೆಯನ್ನು ಪಾವತಿಸಿದ್ದಾರೆ. ಈ ವರ್ಷ ಈ ಪ್ರಮಾಣವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
2016-17ನೆ ಆರ್ಥಿಕ ವರ್ಷದಲ್ಲಿ ಕರ್ನಾಟಕ ಹಾಗೂ ಗೋವಾ ವಲಯದಲ್ಲಿ 1.04 ಲಕ್ಷ ಕೋಟಿ ರೂ.ತೆರಿಗೆ ಸಂಗ್ರಹಿಸಿದ್ದೇವೆ. ಪ್ರತಿ ವರ್ಷ ಜೂ.15, ಸೆ.15, ಡಿ.15 ಹಾಗೂ ಮಾ.15ರಂತೆ ನಾಲ್ಕು ಹಂತಗಳಲ್ಲಿ ಮುಂಗಡ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಮೇಘನಾಥ್ ಚೌವಾಣ್ ತಿಳಿಸಿದರು.
ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಮೊಬೈಲ್ ತಂಡಗಳನ್ನು ರಚಿಸಲಾಗಿದ್ದು, ಅವರು ಇಲ್ಲಿಗೆ ಬರುವಂತಹ ತೆರಿಗೆ ಪಾವತಿ ಮಾಡುವವರಿಗೆ ಅಗತ್ಯ ನೆರವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.