×
Ad

ಜಿಲ್ಲಾ ಕೇಂದ್ರಗಳಲ್ಲಿ ಯುನಾನಿ ಚಿಕಿತ್ಸಾಲಯ ಸ್ಥಾಪನೆ: ಡಾ.ನಸೀಮ್‌ಅಹ್ಮದ್

Update: 2017-07-29 18:38 IST

ಬೆಂಗಳೂರು, ಜು.29: ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಯುನಾನಿ ಚಿಕಿತ್ಸಾಲಯಗಳನ್ನು ಸ್ಥಾಪನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಯುನಾನಿ ವೆಲ್ಫೇರ್ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಡಾ.ನಸೀಮ್ ಅಹ್ಮದ್ ತಿಳಿಸಿದ್ದಾರೆ.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಆಲೋಪತಿ ಆಸ್ಪತ್ರೆಗಳಿರುವ ಕಡೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಯುನಾನಿ ಚಿಕಿತ್ಸಾಲಯಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯದಲ್ಲಿ ಸುಮಾರು 2 ಸಾವಿರ ನೋಂದಾಯಿತ ಆಯುರ್ವೇದ, ಯುನಾನಿ ವೈದ್ಯರಿದ್ದಾರೆ. ಯುನಾನಿ ಪದವಿ ಪಡೆದು ಹೊರಗೆ ಬಂದಿರುವ ಎಲ್ಲರೂ ಖಾಸಗಿಯಾಗಿ ಯುನಾನಿ ಚಿಕಿತ್ಸಾಲಯಗಳನ್ನು ನಡೆಸುತ್ತಿದ್ದಾರೆ. ಭಾರತೀಯ ವೈದ್ಯಕೀಯ ಚಿಕಿತ್ಸಾ ಪದ್ಧತಿಗೆ ಹೆಚ್ಚಿನ ಅವಕಾಶಗಳು ಸಿಗಬೇಕಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಸರಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಹೊರತು ಪಡಿಸಿದರೆ, ಇನ್ನುಳಿದಂತೆ ಕಲಬುರಗಿಯಲ್ಲಿ ಟಿಪ್ಪುಸುಲ್ತಾನ್ ಶಹೀದ್ ಎಜುಕೇಷನ್ ಟ್ರಸ್ಟ್‌ನವರ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ, ತುಮಕೂರಿನ ಎಚ್.ಎಂ. ಎಸ್.ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವಿಜಾಪುರದ ಲುಕ್ಮಾನ್ ಯುನಾನಿ ವೈದ್ಯಕೀಯ ಮಹಾವಿದ್ಯಾಲಯವು ಅನುದಾನ ರಹಿತ ಖಾಸಗಿ ಕಾಲೇಜುಗಳಾಗಿವೆ ಎಂದು ಅವರು ತಿಳಿಸಿದರು.
ಬೀದರ್ ಜಿಲ್ಲೆಯಲ್ಲಿ ಯುನಾನಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವಂತೆ ರಾಜ್ಯ ಯುನಾನಿ ವೆಲ್ಫೇರ್ ಫೌಂಡೇಷನ್ ಟ್ರಸ್ಟ್ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಇದು ಸರಕಾರದ ಪರಿಶೀಲನೆಯಲ್ಲಿದೆ ಎಂದು ನಸೀಮ್ ಅಹ್ಮದ್ ಹೇಳಿದರು.

ಚುನಾವಣಾ ಕಣಕ್ಕೆ: ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ಚುನಾವಣೆಗೆ ನಾನು ನಾಮಪತ್ರ ಸಲ್ಲಿಸಿದ್ದೇನೆ. ಚುನಾವಣಾಧಿಕಾರಿ ಮತದಾನದ ಚೀಟಿಯನ್ನು ನೋಂದಾಯಿತ ಯುನಾನಿ ವೈದ್ಯರಿಗೆ ಕಳುಹಿಸಿ ಕೊಡಲಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಯುನಾನಿ ಚಿಕಿತ್ಸಾ ಪದ್ಧತಿಯನ್ನು ಉನ್ನತಿಗೊಳಿಸುವ ಏಕಮಾತ್ರ ಉದ್ದೇಶದಿಂದ ಚುನಾವಣಾ ಕಣಕ್ಕಿಳಿದಿದ್ದೇನೆ ಎಂದು ಡಾ.ನಸೀಮ್‌ಅಹ್ಮದ್ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಯುನಾನಿ ವೆಲ್ಫೇರ್ ಫೌಂಡೇಷನ್ ಟ್ರಸ್ಟ್‌ನ ಕಾರ್ಯಕಾರಿ ಸದಸ್ಯರಾದ ಡಾ.ಮುಹಮ್ಮದ್ ಅತಾವುಲ್ಲಾ, ಡಾ.ಝಮೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News