×
Ad

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ತೆರೆಯುವಂತೆ ಆಗ್ರಹಿಸಿ ಧರಣಿ

Update: 2017-07-29 19:34 IST

ಬೆಂಗಳೂರು, ಜು.29: ಜಯನಗರದ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರವಿದ್ದ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿರುವ ‘ಜಯನಗರ ಶಾಪಿಂಗ್ ಕಾಂಪ್ಲೆಕ್ಸ್’ ಅನ್ನು ತೆರೆಯಬೇಕೆಂದು ಆಗ್ರಹಿಸಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಧರಣಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ, 50 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಶಾಪಿಂಗ್ ಕಾಂಪ್ಲೆಕ್ಸ್ ಉದ್ಘಾಟನೆಗೊಂಡು ಎರಡು ವರ್ಷಗಳು ಕಳೆಯುತ್ತಿದ್ದರೂ ಇದುವರೆಗೂ ಅದನ್ನು ಸಾರ್ವಜನಿಕ ಉಪಯೋಗಕ್ಕೆ ತೆರೆದಿಲ್ಲ. ಇದರಿಂದಾಗಿ ಸರಕಾರಕ್ಕೆ ವಾರ್ಷಿಕ ಅಂದಾಜು 7 ಕೋಟಿ ರೂ.ಗಳಷ್ಟು ಆದಾಯ ನಷ್ಟವಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ನಗರದ ಪ್ರತಿಷ್ಠೆಯ ಸಂಕೇತವಾಗಿದ್ದ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಅನೇಕ ವರ್ಷಗಳಿಂದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಹೊಸದಾಗಿ ನಿರ್ಮಿಸುವುದಕ್ಕಾಗಿ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರ ಹೆಸರಿನಲ್ಲಿ ಚಿತ್ರಮಂದಿರವಿದ್ದ ಭಾಗವನ್ನೂ ಒಡೆದುಹಾಕಿ ಪುನರ್ ನಿರ್ಮಾಣ ಮಾಡಲಾಗಿದೆ. ಆದರೆ, ಅದು ಇದುವರೆಗೂ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾರ್ಕಿಂಗ್ ಸಮಸ್ಯೆಯಿಂದ ನಗರದ ಜನತೆ ಪರದಾಡುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳ ಸ್ವಜನಪಕ್ಷಪಾತ ಮತ್ತು ಅಧಿಕಾರಿ ವರ್ಗದ ಬೇಜವಾಬ್ದಾರಿಯಿಂದ ಈಗ ಕಟ್ಟಲಾಗಿರುವ ಮೊದಲ ಹಂತದ ಶಾಪಿಂಗ್ ಕಾಂಪ್ಲೆಕ್ಸ್ ಹಂದಿ ಗೂಡಂತಾಗಿದ್ದು, ಕಸದ ತೊಟ್ಟಿಗಳು ತುಂಬಿಕೊಂಡಿವೆ ಎಂದು ತಿಳಿಸಿದರು.

ಏಳು ಅಂತಸ್ತು ಇರುವ ಈ ಕಾಂಪ್ಲೆಕ್ಸ್ 200 ಕ್ಕೂ ಅಧಿಕ ಮಳಿಗೆಗಳು, 350 ಕ್ಕೂ ಅಧಿಕ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಯಿದ್ದು, ದಿನಕ್ಕೆ 2 ಲಕ್ಷ ರೂ.ಗಳಷ್ಟು ಬಾಡಿಗೆ ಆದಾಯ ಬರುತ್ತದೆ. ಎರಡು ವರ್ಷಗಳಿಂದ ಬಾಡಿಗೆಯಿಂದ ಬರಬೇಕಿದ್ದ 12-13 ಕೋಟಿ ರೂ.ಗಳು ಅಧಿಕಾರಿಗಳ ನಿರ್ಲಕ್ಷದಿಂದ ನಷ್ಟವಾಗಿದೆ. ಜನತೆಯ ತೆರಿಗೆ ಹಣವೂ ಪೋಲಾಗುತ್ತಿದೆ ಎಂದ ಅವರು, ಅಧಿಕಾರಿಗಳ ನಿರ್ಲಕ್ಷ ಸರಿಯಲ್ಲ ಎಂದು ಹೇಳಿದರು.
ಹೀಗಾಗಿ, ಮುಂದಿನ ಒಂದೆರಡು ತಿಂಗಳಲ್ಲಿ ಸರಕಾರ ಕಾಂಪ್ಲೆಕ್ಸ್ ಅನ್ನು ಸಾರ್ವಜನಿಕ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಸಾರ್ವಜನಿಕರೊಂದಿಗೆ ಸೇರಿ ಕಟ್ಟಡದ ಸುತ್ತಲೂ ಕಟ್ಟಿರುವ ಬೇಲಿಯನ್ನು ಕಿತ್ತು ಹಾಕಿ, ಸಾರ್ವಜನಿಕ ಮುಕ್ತಗೊಳಿಸಲಾಗುತ್ತದೆ ಎಂದು ರವಿಕೃಷ್ಣಾರೆಡ್ಡಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News