×
Ad

ಪ್ರತಿಷ್ಠಿತ ಹತ್ತು ಕಂಪೆನಿಗಳ ವಿರುದ್ಧ ವಂಚನೆ ಪ್ರಕರಣ

Update: 2017-07-29 20:09 IST

ಬೆಂಗಳೂರು, ಜು.29: ನಿವೇಶನ, ಮನೆ ಹಾಗೂ ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದ ಸುಮಾರು 10 ಪ್ರತಿಷ್ಠಿತ ಕಂಪೆನಿಗಳ ವಿರುದ್ಧ ಸಿಐಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು 3450ಕೋಟಿ ರೂ.ವೌಲ್ಯದ ವಂಚನೆಯನ್ನು ಪತ್ತೆ ಹಚ್ಚಿದ್ದಾರೆ.

 ಅಗ್ರಿಗೋಲ್ಡ್, ಡ್ರೀಮ್ಸ್ ಇಂಡಿಯಾ, ಸೆವೆನ್ಸ್ ಹಿಲ್ಸ್ ಹರ್ಷ ಎಂಟರ್ಟೈಮೆಂಟ್ ಸೇರಿ ಸಾರ್ವಜನಿಕರಿಗೆ ವಂಚನೆ ಮಾಡಿರುವ 10 ಪ್ರತಿಷ್ಠಿತ ಕಂಪೆನಿಗಳ ಹಗರಣಗಳನ್ನು ಸಿಐಡಿ ಪೊಲೀಸರು ಪತ್ತೆ ಹಚ್ಚಲಾಗಿದೆ. ಈ ಕಂಪೆನಿಗಳ ವಿರುದ್ಧ 422 ಪ್ರಕರಣಗಳನ್ನು ದಾಖಲಿಸಿ 100ಮಂದಿಯನ್ನು ಬಂಧಿಸಲಾಗಿದೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಕಿಶೋರ್‌ಚಂದ್ರ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 2013-16ರೊಳಗೆ 10 ಸಂಸ್ಥೆಗಳ ವಿರುದ್ಧ ದಾಖಲಾಗಿದ್ದ 422 ಪ್ರಕರಣಗಳನ್ನು ಸಿಐಡಿ ತನಿಖೆ ಮಾಡುತ್ತಿದೆ. ಈವರೆಗಿನ ಮಾಹಿತಿಯಂತೆ 17,93.480 ಸಾರ್ವಜನಿಕರು 3,273 ಕೋಟಿ ರೂ.ಗಳನ್ನು ಈ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದು ತಿಳಿದು ಬಂದಿದೆ. ಇದರಲ್ಲಿ ಇಂಜಿನಿಯರ್‌ಗಳು, ಸರಕಾರಿ ನೌಕರರು, ನಿವೃತ್ತ ಅಧಿಕಾರಿಗಳು, ಮಹಿಳೆಯರು ಸೇರಿದಂತೆ ಹಲವಾರು ಪ್ರಜ್ಞಾವಂತರೇ ಹಣ ಕಳೆದುಕೊಂಡಿದ್ದಾರೆ ಎಂದು ಅವರು ವಿವರಿಸಿದರು.

 ಅಗ್ರಿಗೋಲ್ಡ್ ಕಂಪೆನಿಯ ಆರೋಪಿ ಹೌವಾ ವೆಂಕಟರಾಮನರಾವ್ ಸಾರ್ವಜನಿಕರಿಂದ 1640 ಕೋಟಿ ರೂ. ಸಂಗ್ರಹಿಸಿದ್ದಾರೆ. ಇವರ ವಂಚನೆ ತನಿಖೆ ಮಾಡಿದ ಪೊಲೀಸರು ಕಂಪೆನಿಗೆ ಸೇರಿದ 430 ಎಕರೆ ಭೂಮಿಯನ್ನು ಜಪ್ತಿ ಮಾಡಿದ್ದಾರೆ. 2006ರಿಂದ 2015ರವರೆಗೆ ಇವರ ವಿರುದ್ಧ 80 ಪ್ರಕರಣಗಳು ದಾಖಲಾಗಿವೆ. 24 ಮಂದಿಯನ್ನು ಬಂಧಿಸಲಾಗಿದೆ. 8,41,616 ಮಂದಿಗೆ 1640 ಕೋಟಿಯಷ್ಟು ವಂಚನೆಯಾಗಿದೆ. ಕಂಪೆನಿಯಿಂದ 250 ಕೋಟಿ ರೂ.ಮೌಲ್ಯದ 530 ಎಕರೆ ಜಮೀನು, 12 ಕಾರು, 76ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

 ಈ ಪ್ರತಿಷ್ಠಿತ ಕಂಪೆನಿಗಳ ಮಾಲಕರು ಸಾರ್ವಜನಿಕರಿಂದ ಪಡೆದುಕೊಂಡ ಹಣವನ್ನು ಮನಸೋಇಚ್ಛೆ ಖರ್ಚು ಮಾಡಿದ್ದಾರೆ. ಕೆಲವರು ಸಿನಿಮಾ ತೆಗೆದಿದ್ದಾರೆ. ಹೆಂಡತಿಯನ್ನು ಹೀರೋಯಿನ್ ಮಾಡುವ ಮೂಲಕ ಮಜಾ ಮಾಡಿದ್ದಾರೆ. ಸಾರ್ವಜನಿಕರು ಕಡಿಮೆ ಬೆಲೆಗೆ ನಿವೇಶನ ಸಿಗಲಿದೆ, ಹೆಚ್ಚು ಬಡ್ಡಿ ಕೊಡುವ ಆಮಿಷ ಒಡ್ಡುವ ಕಂಪೆನಿಗಳಲ್ಲಿ ಹೂಡಿಕೆ ಮಾಡಿ ಮೋಸ ಹೋಗಬಾರದು ಎಂದು ಅವರು ಮನವಿ ಮಾಡಿದರು.

ಇಂತಹ ಕಂಪೆನಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಯಾವುದಾದರು ಕಂಪೆನಿಗಳ ವಿರುದ್ಧ ಅನುಮಾನಗಳು ಬಂದರೆ ಸರಕಾರದ ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿರುವ ಉನ್ನತ ಮಟ್ಟದ ಸಮನ್ವಯ ಸಮಿತಿಗೆ ದೂರು ನೀಡಬೇಕು. ಈ ಸಮಿತಿಯಲ್ಲಿ ಹಲವಾರು ಸರಕಾರಿ ಸಂಸ್ಥೆಗಳ ಪ್ರತಿನಿಧಿಗಳಿದ್ದು, ಪ್ರತಿ ತಿಂಗಳು ಸಭೆ ಮಾಡಿ ಸಾರ್ವಜನಿಕರು ನೀಡುವ ದೂರುಗಳನ್ನು ವಿಚಾರಣೆಗೊಳಪಡಿಸಲಿದೆ ಎಂದು ಕಿಶೋರ್‌ಚಂದ್ರ ಮಾಹಿತಿ ನೀಡಿದರು.

ನಕಲಿ ಕಂಪೆನಿಗಳ ವಿರುದ್ಧ ದೂರು ದಾಖಲಾಗಲಿ

ನಕಲಿ ಕಂಪೆನಿಗಳಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಇತರೆ ಸಾರ್ವಜನಿಕರು ಶೀಘ್ರವಾಗಿ ಮಾಹಿತಿ ನೀಡಿ ದಾಖಲಾತಿ ನೀಡಿದರೆ ತನಿಖೆಗೆ ಅನುಕೂಲವಾಗಲಿದೆ. ಹಾಗೂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವಾಗ ಯಾರಿಗೆಲ್ಲ ವಂಚನೆಯಾಗಿದೆ ಎಂಬ ಮಾಹಿತಿಯನ್ನು ಕೊಡುವ ಅಗತ್ಯವಿದೆ. ಸಿಐಡಿ ಆರೋಪಿಗಳಿಂದ ಜಪ್ತಿ ಮಾಡಿರುವ ಆಸ್ತಿ ಹಾಗೂ ನಗದನ್ನು ವಂಚನೆಗೊಳಗಾದವರಿಗೆ ಹಂಚಿಕೆ ಮಾಡಲು ಸರಕಾರ ಮತ್ತು ನ್ಯಾಯಾಲಯ ಕ್ರಮ ತೆಗೆದುಕೊಳ್ಳಲಿದೆ. ಹೀಗಾಗಿ ವಂಚನೆಗೊಳಗಾದವರು ಸಿಐಡಿ ಕಚೇರಿ 080-22942444ಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ.

-ಕಿಶೋರ್ ಚಂದ್ರ, ಸಿಐಡಿ ಪೊಲೀಸ್ ಮಹಾ ನಿರ್ದೇಶಕರು

ವಂಚಿಸಿದ ನಕಲಿ ಕಂಪೆನಿಗಳು

 -ಹಿಂದೂಸ್ಥಾನ್ ಇನ್‌ಫ್ರಾಕಾನ್ ಕಂಪೆನಿಯ ಪ್ರಮುಖ ಆರೋಪಿ ಲಕ್ಷ್ಮಿನಾರಾಯಣ್ ಸೇರಿದಂತೆ 19 ಮಂದಿ ಆರೋಪಿಗಳು 7,19,293 ಮಂದಿಗೆ 389 ಕೋಟಿ ರೂ. ವಂಚನೆ ಮಾಡಿದ್ದಾರೆ. 2010ರಿಂದ 2016ರ ನಡುವೆ ವಂಚಿಸಿದ್ದಾರೆ. ಇವರ ವಿರುದ್ಧ 64 ಪ್ರಕರಣಗಳನ್ನು ದಾಖಲಿಸಿ 374 ಎಕರೆ ಜಮೀನು, 14ಲಕ್ಷ ರೂ. ಸೇರಿ 34 ಕೋಟಿ ಮೊತ್ತದ ಆಸ್ತಿ ಜಪ್ತಿ ಮಾಡಲಾಗಿದೆ.

 -ಮೈತ್ರಿ ಪ್ಲಾಂಟೆಷನ್ ಅಂಡ್ ಹಾರ್ಟಿಕಲ್ಚರ್ ಪ್ರೈ.ಲಿ. ಕಂಪೆನಿಯು 2007ರಿಂದ 2014ರ ನಡುವೆ 7,779ಮಂದಿಗೆ 10 ಕೋಟಿರೂ.ವನ್ನು ವಂಚಿಸಿದೆ. ಈ ಕಂಪೆನಿಯ ವಿರುದ್ಧ 12 ಪ್ರಕರಣಗಳನ್ನು ದಾಖಲಿಸಿ 7 ಮಂದಿಯನ್ನು ಬಂಧಿಸಿದ್ದು, 43ಕೋಟಿ ರೂ. ಮೌಲ್ಯದ ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿದ್ದ 4,580 ಎಕರೆ ಭೂಮಿಯನ್ನು ಜಪ್ತಿ ಮಾಡಲಾಗಿದೆ. ಆರೋಪಿ ಕೊನ್ನಾರೆಡ್ಡಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

-ಗ್ರೀನ್‌ಬಡ್ಸ್ ಆಗ್ರೋ ಫಾರಂ ಪ್ರೈ.ಲಿ. 2008ರಿಂದ 2013ರವರೆಗೆ 94,045 ಮಂದಿಯಿಂದ 53.88 ಕೋಟಿಯನ್ನು ಸಂಗ್ರಹಿಸಿದೆ. ಈ ಕಂಪೆನಿ ವಿರುದ್ಧ 122 ಪ್ರಕರಣಗಳು ದಾಖಲಾಗಿದ್ದು, ಡಿ.ಎಲ್.ರವೀಂದ್ರನಾಥ್ ಸೇರಿದಂತೆ 5 ಮಂದಿಯನ್ನು ಬಂಧಿಸಲಾಗಿದೆ. ಮೂರು ಮನೆಗಳು, 254ಗುಂಟೆ ಭೂಮಿ, ಮೂರು ನಿವೇಶನ, 8 ವಾಹನ ಸೇರಿದಂತೆ 30 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.

-ಹರ್ಷಾ ಎಂಟರ್ಟೈಮೆಂಟ್ ಕಂಪೆನಿ 2009ರಿಂದ 2015ರ ನಡುವೆ 74 ಸಾವಿರ ಜನರಿಂದ 136 ಕೋಟಿ ರೂ. ಸಂಗ್ರಹಿಸಿದೆ. ಈ ಕಂಪೆನಿಯ ಒಂದು ಪ್ರಕರಣವನ್ನು ದಾಖಲಿಸಿ 8 ಮಂದಿಯನ್ನು ಬಂಧಿಸಲಾಗಿದೆ. ಜಮೀನು, ಸೈಟುಗಳು, ಮನೆ, ಷೇರು, ವಾಹನಗಳು ಸೇರಿ ವಿವಿಧ ಸಿನಿಮಾಗಳ ನಿರ್ಮಾಣಕ್ಕೆ ಹೂಡಲಾಗಿದ್ದ 9.42 ಕೋಟಿರೂ. ಒಳಗೊಂಡಂತೆ 40 ಕೋಟಿರೂ.ಗಳ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

-ಡ್ರೀಮ್ಸ್ ಇಂಡಿಯಾ ಕಂಪೆನಿಯು 2011ರಿಂದ 2016ರವರೆಗೆ 6500 ಮಂದಿಯಿಂದ 573 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಈ ಸಂಬಂಧ 37 ಪ್ರಕರಣಗಳನ್ನು ಬಂಧಿಸಿ 3 ಮಂದಿಯನ್ನು ಬಂಧಿಸಲಾಗಿದೆ. ಜಮೀನು, ನಿವೇಶನ 100 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.

  -ಟಿಜಿಎಸ್ ಕನ್‌ಸ್ಟ್ರಕ್ಷನ್ ಲಿ. ಕಂಪೆನಿಯು 2013ರಿಂದ 2016ರವರೆಗೆ 5315 ಮಂದಿಯಿಂದ 260 ಕೋಟಿ ರೂ.ವನ್ನು ಸಂಗ್ರಹಿಸಿದೆ. ಈ ಕಂಪೆನಿಯ ವಿರುದ್ಧ 27 ಪ್ರಕರಣಗಳು ದಾಖಲಾಗಿದ್ದು, 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 15ಲಕ್ಷ ರೂ.ನಗದು, 250 ಗ್ರಾಂ ಚಿನ್ನ ಸೇರಿದಂತೆ 65 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.

-ಸಚಿನ್‌ನಾಯಕ್, ಮಜುಂದಾರ್ ಶತಪರಿಣಿ ಸೇರಿದಂತೆ 6 ಮಂದಿ ಆರೋಪಿಗಳು 6237 ಮಂದಿಯಿಂದ 277ಕೋಟಿ ಗಳನ್ನು ಸಂಗ್ರಹಿಸಲಾಗಿದೆ. 18 ಪ್ರಕರಣಗಳನ್ನು ದಾಖಲಿಸಲಾಗಿದ್ದು, 21 ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಸೆವನ್ಸ್ ಹಿಲ್ಸ್ ಕಂಪೆನಿಯ ಜಿ.ನಾರಾಯಣಪ್ಪ ಸೇರಿದಂತೆ 28 ಮಂದಿ ಆರೋಪಿಗಳು 1.3ಲಕ್ಷ ಜನರಿಂದ 81 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಇವರಿಂದ 13 ಪ್ರಕರಣಗಳನ್ನು ದಾಖಲಿಸಲಾಗಿದೆ. 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

 -ಜೀವರಾಜ್ ಪುರಾಣಿಕ್ ಹಾಗೂ ಇತರೆ ಮೂರು ಮಂದಿಗೆ ಸೇರಿದ ವೃಕ್ಷ ಬಿಜಿನಸ್ ಕಂಪೆನಿ 1995 ಮಂದಿಗೆ 30 ಕೋಟಿ ರೂ. ವಂಚನೆ ಮಾಡಿದೆ. ಈ ಕಂಪೆನಿ ವಿರುದ್ಧ 339 ಪ್ರಕರಣಗಳು ದಾಖಲಾಗಿದ್ದು, 10 ಲಕ್ಷ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು. ಇದರಲ್ಲಿ ಬಹುತೇಕ ಆರೋಪಿಗಳು ಈಗಲೂ ಪೊಲೀಸರ ವಿಚಾರಣೆಯಲ್ಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News