×
Ad

ಸರಕಾರಿ ಶಾಲೆಗಳಲ್ಲಿ ಅರೇಬಿಕ್ ಬೋಧನೆ ವಿಸ್ತರಣೆಯ ಪ್ರಸ್ತಾವನೆ ಇಲ್ಲ: ಸೌಜನ್ಯಾ

Update: 2017-07-29 20:31 IST

ಬೆಂಗಳೂರು, ಜು.29: ಸರಕಾರಿ ಶಾಲೆಗಳಲ್ಲಿ ಅರೇಬಿಕ್ ಬೋಧನೆಯ ವ್ಯಾಪ್ತಿಯನ್ನು ವಿಸ್ತರಿಸಲು ಯಾವುದೆ ಪ್ರಸ್ತಾವನೆ ಇಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತೆ ಸೌಜನ್ಯಾ ಸ್ಪಷ್ಟಣೆ ನೀಡಿದ್ದಾರೆ.

ಕನ್ನಡ ಮಾಧ್ಯಮವನ್ನಾಗಿ ಹೊಂದಿದ ಸುಮಾರು 40 ಸಾವಿರ ಸರಕಾರಿ ಪ್ರಾಥಮಿಕ ಶಾಲೆಗಳಿವೆ. ಇದಲ್ಲದೆ, ಸುಮಾರು 4500 ಅಲ್ಪಸಂಖ್ಯಾತ ಭಾಷೆಗಳಾದ ಉರ್ದು, ಮರಾಠಿ, ತೆಲುಗು ಮತ್ತು ತಮಿಳು ಭಾಷಾ ಮಾಧ್ಯಮ ಶಾಲೆಗಳಿವೆ ಎಂದು ಅವರು ಹೇಳಿದ್ದಾರೆ. ಈ ಎಲ್ಲ ಶಾಲೆಗಳಲ್ಲಿ 1ನೆ ತರಗತಿಯಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಲಾಗುತ್ತಿದೆ. ಹಾಗೂ ಇಂಗ್ಲಿಷ್ ಭಾಷೆಯನ್ನು ಸಾಮಾನ್ಯವಾಗಿ ದ್ವಿತೀಯ ಭಾಷೆಯನ್ನಾಗಿ ಕಲಿಸಲಾಗುತ್ತಿದೆ. ಅಲ್ಪಸಂಖ್ಯಾತ ಭಾಷಾ ಶಾಲೆಗಳಲ್ಲಿ, ಅದೇ ಭಾಷೆಯನ್ನು ಒಂದನೆ ತರಗತಿಯಿಂದ ಕಲಿಸಲಾಗುತ್ತಿದೆ ಎಂದು ಸೌಜನ್ಯಾ ತಿಳಿಸಿದ್ದಾರೆ.

ತೃತೀಯ ಭಾಷೆಯು ಸಾಮಾನ್ಯವಾಗಿ ಆರನೇ ತರಗತಿಯಿಂದ ಪ್ರಾರಂಭವಾಗುತ್ತದೆ. ಪ್ರಸ್ತುತ ಸುಮಾರು 550 ವಿದ್ಯಾರ್ಥಿಗಳು ಅರೇಬಿಕ್ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಅಧ್ಯಯನ ಮಾಡುತ್ತಿದ್ದಾರೆ. ಅರೇಬಿಕ್ ಭಾಷೆಯನ್ನು ಶಾಲೆಗಳಲ್ಲಿ ಒಂದು ಭಾಷೆಯನ್ನಾಗಿ ಬೋಧಿಸಲು ಸರಕಾರ ಪರಿಗಣಿಸುತ್ತಿದೆ ಎಂದು ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ, ಅಂತಹ ಯಾವುದೆ ಪ್ರಸ್ತಾವನೆಯು ಇಲಾಖೆಯ ಮುಂದೆ ಇಲ್ಲ ಎಂದು ಅವರು ಹೇಳಿದ್ದಾರೆ.

ಶಿಕ್ಷಕರ ಅಭಿಪ್ರಾಯದಂತೆ, ಅವರ ಅಗತ್ಯತೆಗಳ ಅನುಸಾರ ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ತಮ್ಮ ಜ್ಞಾನ ಮತ್ತು ಬೋಧನಾ ವಿಧಾನವನ್ನು ಸುಧಾರಿಸಿಕೊಳ್ಳಲು, ಶಿಕ್ಷಕರಿಗೆ ನೆರವಾಗಲು ಸೆಪ್ಟಂಬರ್ 5ರ ಶಿಕ್ಷಕರ ದಿನಾಚರಣೆಯಂದು ಗುರು-ಚೇತನ ಎಂಬ ಶಿಕ್ಷಕ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಸೌಜನ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News