ಮಹಿಳೆ, ಪುರುಷರ ನಡುವಿನ ತಾರತಮ್ಯ ಇನ್ನೂ ಜೀವಂತ: ನ್ಯಾ.ರತ್ನಕಲಾ
ಬೆಂಗಳೂರು, ಜು.29: ದೇಶಕ್ಕೆ ಸ್ವಾತಂತ್ರ ಲಭಿಸಿ ಏಳು ದಶಕ ಕಳೆದರೂ ಮಹಿಳೆ ಹಾಗೂ ಪುರುಷರ ನಡುವಿನ ತಾರತಮ್ಯ ಇನ್ನೂ ಜೀವಂತವಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ರತ್ನಕಲಾ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ಶೇಷಾದ್ರಿಪುರ ಕಾನೂನು ಮಹಾವಿದ್ಯಾಲಯದಲ್ಲಿ ಕರ್ನಾಟಕ ಮಹಿಳಾ ಆಯೋಗ ಆಯೋಜಿಸಿದ್ದ ವಿದ್ಯುನ್ಮಾನ ಯುಗದಲ್ಲಿ ಮಹಿಳೆ ಹಕ್ಕು ಮತ್ತು ಘನತೆ ರಕ್ಷಣೆ - ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಿಜಿಟಲೀಕರಣದ ಭರಾಟೆಯಲ್ಲಿ ಮಹಿಳಾ ಸುರಕ್ಷತೆ ಇಲ್ಲದಂತಾಗಿದೆ. ವಿದ್ಯುನ್ಮಾನ ತಂತ್ರಾಂಶಗಳನ್ನು ಮಹಿಳೆಯರ ಮೇಲೆ ದುರ್ಬಳಕೆ ಮಾಡಲಾಗುತ್ತಿದೆ. ಇದರ ನಡುವೆ ಮಹಿಳೆ ತನ್ನ ಹಕ್ಕು ಹಾಗೂ ಘನತೆಯನ್ನು ರಕ್ಷಿಸಿಕೊಳ್ಳಬೇಕಿದೆ. ಅಲ್ಲದೆ, ದೇಶಕ್ಕೆ ಸ್ವಾತಂತ್ರ ಲಭಿಸಿದರೂ ಮಹಿಳೆ ಹಾಗೂ ಪುರುಷರ ನಡುವಿನ ತಾರತಮ್ಯ ಇನ್ನೂ ಜೀವಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ತಂತ್ರಜ್ಞಾನ ಹಾಗೂ ಆಧುನಿಕ ವಿದ್ಯಮಾನಗಳಿಂದ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದ ಅವರು, ದೇಶದಲ್ಲಿ ಹೆಣ್ಣಿನ ಸ್ಥಾನಮಾನ ಬದಲಾಯಿಸುವ ಕಾರ್ಯ ಈಗಿನ ವಿದ್ಯಾರ್ಥಿನಿ ಸಮೂಹದ ಕೈಯಲ್ಲಿದೆ ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಕೃಷ್ಣಸ್ವಾಮಿ ಮಾತನಾಡಿ, ಡಿಜಿಟಲೀಕರಣ ಹಾಗೂ ಮಾಹಿತ ತಂತ್ರಜ್ಞಾನದ ಯುಗದಲ್ಲಿ ಸೈಬರ್ ಕ್ರೈಂಗಳನ್ನು ತಡೆಯುವುದೇ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಸೈಬರ್ ಅಪರಾಧಗಳ ತಡೆಗೆ ಪ್ರತ್ಯೇಕ ತಂಡಗಳಿದ್ದರೂ, ಅವುಗಳಿಂದ ಮಹಿಳೆಯರ ರಕ್ಷಣೆ ಎಷ್ಟು ಸಾಧ್ಯ ಎಂಬ ಪ್ರಶ್ನೆಯೂ ಏಳುತ್ತಿದೆ. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಮಹಿಳೆಯರಿಗೆ ಎಲ್ಲ ವಿಭಾಗದಲ್ಲೂ ಶೇ.33 ರ ಬದಲಾಗಿ ಶೇ.50 ಮೀಸಲಾತಿ ನೀಡಬೇಕಿದೆ ಎಂದು ಹೇಳಿದರು.
ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಎಂ. ಪ್ರಕಾಶ್, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧಗಳಿಗೆ ಕಠಿಣ ಕಾನೂನು ತರುವ ಮೂಲಕ ಅವರ ರಕ್ಷಣೆ ಮಾಡಬೇಕು. ಕಾನೂನು ಪ್ರಕ್ರಿಯೆಗಳು ಶೀಘ್ರ ಇತ್ಯರ್ಥಗೊಳ್ಳುವುದು ಪ್ರಮುಖವಾಗುತ್ತದೆ. ಇಂದಿಗೂ ದೇಶದ ಗ್ರಾಮೀಣ ಭಾಗದಲ್ಲಿ ಪುರುಷರು ಮಾಡುವ ಎಷ್ಟೋ ತಪ್ಪುಗಳಿಗೆ ಮನೆಯ ಹೆಣ್ಣುಮಕ್ಕಳಿಗೆ ಶಿಕ್ಷೆ ನೀಡುವ ಪದ್ಧತಿ ಜಾರಿಯಲ್ಲಿದೆ. ದೇಶಕ್ಕೆ ಸ್ವಾತಂತ್ರ ಸಿಕ್ಕರೂ, ಮಹಿಳೆಯರಿಗೆ ಇನ್ನೂ ಸರಿಯಾದ ಸ್ವಾತಂತ್ರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರ ಶಿಕ್ಷಣ ಸಂಸ್ಥೆ ಗೌರವ ಸಹಕಾರ್ಯದರ್ಶಿ ಸರೋಜ ಕೆ.ಎಂ. ನಂಜಪ್ಪ, ಪ್ರಾಂಶುಪಾಲೆ ಪ್ರೊ. ಡಿ. ನಿರ್ಮಲಾ, ಸಂಸ್ಥೆ ಟ್ರಸ್ಟಿ ಪರಮಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.