×
Ad

ದೇವರ ಮೇಲೆ ನಂಬಿಕೆಯುಳ್ಳ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ: ರಾಮಚಂದ್ರೇಗೌಡ

Update: 2017-07-30 17:37 IST

ಬೆಂಗಳೂರು, ಜು. 30: ದೇವರ ನಾಡು ಎಂಬ ಖ್ಯಾತಿಗೆ ಗುರಿಯಾಗಿದ್ದ ಕೇರಳದಲ್ಲಿ ದೇವರು ಆಳ್ವಿಕೆ ನಡೆಸುತ್ತಿಲ್ಲ. ಹೀಗಾಗಿ ಭವಿಷ್ಯದಲ್ಲಿ ದೇವರ ಮೇಲೆ ನಂಬಿಕೆ ಇರುವ ಪಕ್ಷ(ಬಿಜೆಪಿ)ಅಲ್ಲಿ ಅಧಿಕಾರಕ್ಕೆ ಬರಬೇಕೆಂದು ಮೇಲ್ಮನೆ ಸದಸ್ಯ ರಾಮಚಂದ್ರೇಗೌ ಹೇಳಿದ್ದಾರೆ.

ರವಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಮಲೆಯಾಳಿ ಘಟಕದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ನಗದು ರಹಿತ ವ್ಯವಹಾರವನ್ನು ಜಾರಿಗೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ದೇಶ ನಗದು ರಹಿತ ವ್ಯವಹಾರದಿಂದ ಭಾರತ ಲಂಚ ಮುಕ್ತ ದೇಶವಾಗಲಿದೆ ಎಂದರು.

ರಾಷ್ಟ್ರೀಯಾಧ್ಯಕ್ಷ ಅಮಿತ್ ಷಾ ಅವರ ತಂತ್ರಗಾರಿಕೆಗೆ ಹೆದರಿರುವ ಗುಜರಾತ್‌ನ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ ಅವರಿಗೆ ಆತಿಥ್ಯ ನೀಡಲು ರಾಜ್ಯದ ಯಾವ ಸಚಿವರು ಮುಂದೆ ಬಂದಿಲ್ಲ. ಅವರಿಗೆಲ್ಲ ಮೋದಿ ಮತ್ತು ಅಮಿತ್ ಷಾ ಅವರ ಹೆದರಿಕೆಯೇ ಕಾರಣ ಎಂದು ಟೀಕಿಸಿದರು.

ಮಲೆಯಾಳಿ ಬಿಜೆಪಿ ಘಟಕವನ್ನು ಅಸ್ತಿತ್ವಕ್ಕೆ ತಂದಿರುವುದು ಮತದ ಬೇಟೆಗಾಗಿ ಅಲ್ಲ. ಬದಲಿಗೆ ನಾವೆಲ್ಲರೂ ಒಂದೇ. ನಮ್ಮ ನಡೆ, ನುಡಿ, ಕ್ರಿಯಾಶೀಲತೆಯ ಮೂಲಕ ಭಾರತೀಯತೆಯನ್ನು ಎತ್ತಿಹಿಡಿಯುವುದೇ ಆಗಿದೆ ಎಂದು ರಾಮಚಂದ್ರೇಗೌಡ ಇದೇ ವೇಳೆ ಸ್ಪಷ್ಟಣೆ ನೀಡಿದರು.

ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ, ಕೇರಳ ಘಟಕದ ಮಾಜಿ ಅಧ್ಯಕ್ಷ ಪಿ.ಕೆ.ಕೃಷ್ಣದಾಸ್, ಶಾಸಕ ಮುನಿರಾಜು, ಘಟಕದ ಸಂಚಾಲಕ ಗೋಪಿನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News