ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಬೆಂಗಳೂರು, ಜು.30: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖಾ ನೌಕರರ ಸಂಘದ ವತಿಯಿಂದ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಇಲಾಖೆಯ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ರವಿವಾರ ನಗರದ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಲಾಖೆಯ ನೌಕರರ ಮಕ್ಕಳಾದ ಎಚ್.ಸಿ.ರಮ್ಯ, ಜೀವನ್‌ರಾಜ್, ಗಾನವಿ ಆನಂದಕುಮಾರ್, ಸಿ.ಲೋಹಿತ್‌ಗೆ ಪ್ರತಿಭಾ ಪುರಸ್ಕಾರ ನೀಡಿದರು. ಹಾಗೂ ನಿವೃತ್ತ ನೌಕರರಾದ ತಿಪ್ಪೇಸ್ವಾಮಿ ಸೇರಿದಂತೆ ಅನೇಕರಿಗೆ ಸನ್ಮಾನ ಮಾಡಿ ಬೀಳ್ಕೊಡಲಾಯಿತು.
ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕ ಎಲ್.ಶಶಿಕುಮಾರ್ ಮಾತನಾಡಿ, ಇಲಾಖೆಯಲ್ಲಿ ಸೇವೆ ಮಾಡುವಷ್ಟು ದಿನ ನಿಷ್ಟೆಯಿಂದ, ಪ್ರಾಮಾಣಿಕತೆ, ಬದ್ಧತೆಯಿಂದ ಕೆಲಸ ಮಾಡಿದರೆ ಎಲ್ಲರನ್ನೂ ಸಮಾಜ ಗುರುತಿಸುತ್ತದೆ. ನಾವು ನಮ್ಮ ವೃತ್ತಿ ಧರ್ಮಕ್ಕೆ ಎಂದಿಗೂ ಮೋಸ ಮಾಡಬಾರದು ಎಂದು ಅವರು ಹೇಳಿದರು.
ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಮೂಲಕ ಸರಕಾರಿ ಅಧಿಕಾರಿಗಳು ಉತ್ತಮ ಸಮಾಜ ನಿರ್ಮಿಸಲು ಮುಂದಾಗಬೇಕು. ಜನರ ಸಮಸ್ಯೆಗಳಿಗೆ ಸ್ಪಂಧಿಸಬೇಕು. ನಮ್ಮ ಇಲಾಖೆಯಿಂದ ಇರುವ ಯೋಜನೆಗಳ ಕುರಿತು ಅರಿವು ಮೂಡಿಸಬೇಕು. ಅಧಿಕಾರಿಗಳಾಗಿ ನಮ್ಮ ಮನಸ್ಸಿನಲ್ಲಿ ಪರಿಶುದ್ಧತೆಯ ಹಾಗೂ ವಿಶ್ವಾಸವಿದ್ದರೆ ನಾವು ಸಾರ್ವಜನಿಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿರುತ್ತೇವೆ ಎಂದು ಅವರು ಅಭಿಪ್ರಾಯಿಸಿದರು.
ವಿದ್ಯಾರ್ಥಿಗಳಲ್ಲಿ ನಿರಂತರ ಪರಿಶ್ರಮ, ಅಚಲ ನಿಷ್ಠೆಯಿದ್ದರೆ ಏನನ್ನು ಬೇಕಾದರೂ ಸಾಧನೆ ಮಾಡಬಹುದು. ಗುಂಪುಗಾರಿಕೆ, ಸ್ವಾರ್ಥದಿಂದ ಬದುಕುವುದನ್ನು ಮಕ್ಕಳು ಕಲಿಯಬಾರದು. ಪ್ರೀತಿ ಮತ್ತು ಸ್ನೇಹದಿಂದ ಎಲ್ಲರನ್ನೂ ಆತ್ಮೀಯರನ್ನಾಗಿಸಿಕೊಳ್ಳಬೇಕು ಎಂದ ಅವರು, ಪೋಷಕರು ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಡಿಎ ಹೆಚ್ಚುವರಿ ನಿರ್ದೇಶಕ ಎಂ.ಎನ್.ಕುಮಾರ್, ಸಂಘದ ಗೌರವಾಧ್ಯಕ್ಷ ಜೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ಎ.ಪ್ರಭಣ್ಣವರ, ಉಪಾಧ್ಯಕ್ಷ ಶರಣಪ್ಪ ಮಡಿವಾಳ ಉಪಸ್ಥಿತರಿದ್ದರು.