×
Ad

ಮೌಲ್ಯ ಕಳೆದುಕೊಳ್ಳುತ್ತಿರುವ ಪ್ರಶಸ್ತಿಗಳು: ಶಾ.ಮಂ.ಕೃಷ್ಣರಾಯರು

Update: 2017-07-30 17:44 IST

ಬೆಂಗಳೂರು, ಜು. 30: ಜಾತಿ, ಸಮುದಾಯ, ಭೂ ಪ್ರದೇಶದಂತಹ ಸಣ್ಣ ವಿಷಯಗಳನ್ನು ಪರಿಗಣಿಸಿ ಪ್ರಶಸ್ತಿಗಳಿಗೆ ಆಯ್ಕೆ ಮಾಡುತ್ತಿರುವುದರಿಂದ ಪ್ರಶಸ್ತಿಗಳು ತನ್ನ ವೌಲ್ಯ ಕಳೆದುಕೊಳ್ಳುತ್ತಿವೆ ಎಂದು ಹಿರಿಯ ಸಾಹಿತಿ ಶಾ.ಮಂ.ಕೃಷ್ಣರಾಯರು ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಲೇಖಾ, ಪ್ರೇಮಾಭಟ್ ಮತ್ತು ಎ.ಎಸ್.ಭಟ್ ದತ್ತಿ ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಅವರು, ಈ ರೀತಿಯ ಸಣ್ಣ ವಿಷಯಗಳನ್ನು ಪರಿಗಣಿಸಿ ಪ್ರಶಸ್ತಿಗಳನ್ನು ನಿಡುತ್ತಿರುವುದರಿಂದ ಉತ್ತಮ ಲೇಖಕರರು ಪ್ರಶಸ್ತಿಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿಗಳ ಸುಗ್ಗಿಕಾಲವೇ ಆರಂಭವಾಗಿದೆ. ಪ್ರಶಸ್ತಿಗಳು ತಾನಾಗಿಯೇ ಹುಡುಕಿಕೊಂಡು ಬರಬೇಕೇ ವಿನಹ ಪ್ರಶಸ್ತಿಗಳ ಹಿಂದೆ ಬೀಳಬಾರದು. ಇಂದು ಪ್ರಶಸ್ತಿಗಳ ಹಿಂದೆ ಲೇಖಕರು ಬಿದ್ದಿರುವುದರಿಂದ ಸಾಹಿತ್ಯ ಕುಲಗೇಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಶಸ್ತಿಗಳ ಹಿಂದೆ ಬೀಳುವ ಲೇಖಕರಿಂದ ಸಾಹಿತ್ಯ ತನ್ನ ಸತ್ವ, ಗುರುತ್ವವನ್ನು ಕಳೆದುಕೊಳ್ಳಲಿದೆ.ಇಂತಹ ಸಾಹಿತ್ಯ ಎಚ್ಚು ಕಾಲ ಉಳಿಯುವುದಿಲ್ಲ. ಲೇಖಕಿಯರಿಗಿಂತ ಲೇಖಕರು ಹೆಚ್ಚು ಪ್ರಶಸ್ತಿಗಳ ಹಿಂದೆ ಬೀಳುತ್ತಿದ್ದಾರೆ. ಇಂತಹ ಪೂರ್ವಗ್ರಹದಿಂದ ಇಂದಿನ ಯುವ ಲೇಖಕರು ಹೊರಬರಬೇಕಿದೆ ಎಂದು ಹೇಳಿದರು.

ಉತ್ತಮ ಬರಗಾರ್ತಿಯರನ್ನು ಪರಿಗಣಿಸಿ ಕರ್ನಾಟಕ ಲೇಖಕಿಯರ ಸಂಘ ಪ್ರಶಸ್ತಿಗಳನ್ನು ನೀಡುತ್ತಿರುವುದು ಸ್ವಾಗತಾರ್ಹ. ಅರ್ಹ ಲೇಖಕಿಯರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಿರುವ ಸಂಘ ಗೌರವವನ್ನು ಕಾಪಾಡಿಕೊಂಡಿದೆ. ಎಲೆಮರೆ ಕಾಯಿಯಂತೆ ಇರುವ ಲೇಖಕಿಯರನ್ನು ಪತ್ತೆ ಮಾಡಿ ಸಮಾಜಕ್ಕೆ ಪರಿಚಯಿಸುತ್ತಿರುವುದು ಶ್ಲಾಘಿನೀಯ ಎಂದರು.

ಲೇಖಕಿಯರನ್ನು ವಿಮರ್ಶಕರಿಗೆ ಪರಿಚಯಿಸದೆ ಇರುವುದೇ ಉತ್ತಮ. ವಿಮರ್ಶಕರು ಭಯೋತ್ಪಾದಕರಿದ್ದಂತೆ. ಅವರು ಓದುಗರಲ್ಲಿ ಮತ್ತು ಲೇಖಕರಲ್ಲಿ ಭಯವನ್ನು ಹುಟ್ಟಿಸುತ್ತಾರೆ. ಈ ರೀತಿಯ ಕೆಲ ಭಯೋತ್ಪಾದಕ ವಿಮರ್ಶಕರನ್ನು ಹೊರತುಪಡಿಸಿದರೆ ಉತ್ತಮ ವಿಮರ್ಶಕರೂ ಇದ್ದಾರೆ. ಆದರೂ, ಬೇರೆಯವರ ವಿಮರ್ಶೆಗೆ ನಮ್ಮ ಬರಹವನ್ನು ಒಡ್ಡುವುದಕ್ಕಿಂತ ನಾವೇ ವಿಮರ್ಶೆ ಮಾಡಿಕೊಳ್ಳುವುದರಿಂದ ನಮ್ಮ ಸಾಹಿತ್ಯ ಇನ್ನಷ್ಟು ಸುಧಾರಿಸುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರಾಧ್ಯಾಪಕಿ ಪ್ರೊ.ಟಿ.ಪದ್ಮಾ ಚಿನ್ಮಯಿ ಮಾತನಾಡಿ, ಬಹಳ ಪ್ರಾಚೀನ ಕಾಲದಿಂದಲೂ ಮಹಿಳೆಯರು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರ. ಆದರೆ, ಅಲ್ಲಿಂದ ಇಲ್ಲಿಯವರೆಗೂ ಯಾರೂ ಅದನ್ನು ಮುಕ್ತಮನಸ್ಸಿನಿಂದ ಒಪ್ಪಿಕೊಂಡಿಲ್ಲ. ನಮ್ಮಲ್ಲಿ ವಚನಕಾರರ ಸಮಾನವಾಗಿ ವಚನಕಾರ್ತಿಯರು ಮಾಡಿದ ಕ್ರಾಂತಿಯನ್ನು ಮರೆಯುವಂತಿಲ್ಲ. ಅವುಗಳೇ ಇಂದಿನ ಲೇಖಕಿಯರಿಗೆ ಸ್ಫೂರ್ತಿ ಎಂದರು.

ಲೇಖಕಿರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಲೇಖಕಿಯರನ್ನು ಮುನ್ನೆಲೆಗೆ ತರಲು ಸಂಘ ಪ್ರಯತ್ನಿಸುತ್ತಿದೆ. ಹಿರಿಯ ಲೇಖಕಿಯರ ಕುರಿತು ಯುವ ಲೇಖಕಿಯರಿಗೆ ಪರಿಚಯಿಸಲು ಈ ರೀತಿಯ ಕಾರ್ಯಕ್ರಮಗಳಿಂದ ಸಾಧ್ಯ ಎಂದರು.

ಶೀಲೇಖಾ ಪ್ರಶಸ್ತಿಯನ್ನು ಪತ್ರಕರ್ತೆ ಎಚ್.ಸಿ.ಭುವನೇಶ್ವರಿ ಅವರಿಗೆ , ಪ್ರೇಮಾಭಟ್ ಮತ್ತು ಎ.ಎಸ್.ಭಟ್ ದತ್ತಿ ಪ್ರಶಸ್ತಿಯನ್ನು ಲೇಖಕಿ ಇಂದಿರಾ ಹಾಲಂಬಿ ಅವರಿಗೆ ಪ್ರದಾನಿಸಲಾಯಿತು. ಪ್ರಶಸ್ತಿಗಳು ನಗದು, ಫಲಕಗಳನ್ನು ಒಳಗೊಂಡಿವೆ. ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ಪ್ರೇಮಾಭಟ್ ಸೇರಿದಂತೆ ಇತರರು ಇದ್ದರು.

‘ಕನ್ನಡಕ್ಕೆ ಬಂದಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳಲ್ಲಿ ಐದು ಅರ್ಹತೆ ಮೇಳೆ ಬಂದರೆ, ಉಳಿದ ಮೂರು ಅಡ್ಡದಾರಿಯಿಂದ ಬಂದಿವೆ. ಈ ಮೂರು ಪ್ರಶಸ್ತಿಗಳನ್ನು ಪಡೆದವರ್ಯಾರು ಎಂಬುವುದು ರಾಜ್ಯದ ಜನರಿಗೆ ಗೊತ್ತಿದೆ’
 -ಶಾ.ಮಂ.ಕೃಷ್ಣರಾಯರು, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News