×
Ad

ವೃತ್ತಿಪರ ಕೋರ್ಸ್‌ಗಳಲ್ಲಿ ಕನ್ನಡ ಇರಲಿ: ಡಾ.ವೂಡೇ ಪಿ.ಕೃಷ್ಣ

Update: 2017-07-30 17:48 IST

ಬೆಂಗಳೂರು, ಜು.30: ವೃತ್ತಿಪರ ಕೋರ್ಸ್‌ಗಳಲ್ಲಿ ಕನ್ನಡವನ್ನು ಒಂದು ಕಡ್ಡಾಯ ವಿಷಯವನ್ನಾಗಿ ವಿಶ್ವವಿದ್ಯಾಲಯಗಳು ಮಾಡಬೇಕೆಂದು ಗಾಂಧಿನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಇಂದಿಲ್ಲಿ ಒತ್ತಾಯಿಸಿದ್ದಾರೆ.

ರವಿವಾರ ನಗರದ ರವಿವಾರ ನಗರದ ರೇಣುಕಾಚಾರ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ನಾಲ್ಕನೆ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಭಾಷಣ ಮಾಡಿದ ಅವರು, ರಾಜ್ಯದ ಎಲ್ಲ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ಗಳಲ್ಲಿ ಕನ್ನಡವನ್ನು ಒಂದು ಕಡ್ಡಾಯ ವಿಷಯವನ್ನಾಗಿ ವಿಶ್ವವಿದ್ಯಾಲಯಗಳು ಮಾಡಬೇಕೆಂದರು.

ಇದೀಗ ವಿದ್ಯಾರ್ಥಿಗಳು ಕೇವಲ ಪದವಿ ಪೂರ್ವ ಕಾಲೇಜಿನವರೆಗೆ ಮಾತ್ರ ಕನ್ನಡವನ್ನು ಅಭ್ಯಾಸ ಮಾಡುತ್ತಾರೆ. ನಂತರ ಪದವಿಯಲ್ಲಿಯೂ ಕನ್ನಡ ಓದಿಗೆ ಅವಕಾಶವಿದೆ. ಆದರೆ, ವೃತ್ತಿಪರ ಕೋರ್ಸ್‌ಗಳಿಗೆ ಸೇರಿದಂತಹ ಮಕ್ಕಳಿಗೆ ಕನ್ನಡ ಕಲಿಕೆ ನಿಂತು ಹೋಗುತ್ತದೆ. ಆದ್ದರಿಂದ ಈ ಕೋರ್ಸ್‌ಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಿದರು. ಗಾಂಧಿನಗರ ಕ್ಷೇತ್ರವನ್ನು ಮಿನಿ ಭಾರತ ಎಂದು ಹೇಳಿದರೆ ತಪ್ಪಿಲ್ಲ, ಏಕೆಂದರೆ, ಇಲ್ಲಿ ಹಲವಾರು ವಿಭಿನ್ನ ಸಂಸ್ಕೃತಿಗೆ ಸೇರಿದ ಭಾಷಿಕರು ವಾಸಿಸುತ್ತಿದ್ದಾರೆ. ಇಷ್ಟೊಂದು ವಿಶೇಷತೆಗಳ ನಡುವೆ ಇಲ್ಲಿ ಮುಖ್ಯವಾಗಿ ಕಸವಿಲೇವಾರಿ, ವಾಯುಮಾಲಿನ್ಯ ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೂಡೇ ಕೃಷ್ಣ ಒತ್ತಾಯಿಸಿದರು.

ಮಾಜಿ ಸಚಿವೆ ಡಾ.ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ರಾಜ್ಯ ಸರಕಾರ ಕನ್ನಡ ಪರ ನಿಲುವು ಹೊಂದಿರುವುದು ಒಳ್ಳೆಯ ಬೆಳವಣಿಗೆ. ಅದೇ ರೀತಿ, ರಾಜ್ಯದ ಗಡಿ ಭಾಗಗಳಲ್ಲೂ ಕನ್ನಡ ಗಟ್ಟಿಗೊಳಿಸಬೇಕು, ವೈದ್ಯಕೀಯ, ವಾಣಿಜ್ಯ, ತಂತ್ರಜ್ಞಾನ ಹೀಗೆ ವಿವಿಧ ವೃತಿಪರ ವಿಷಯಗಳಲ್ಲಿ ಸಾಹಿತ್ಯ ರಚನೆಯಾಗಬೇಕೆಂದರು.

ಸಮ್ಮೇಳನದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ಮಂಜುನಾಥ್, ಬಿ.ಎಂ.ನಂಜುಂಡಸ್ವಾಮಿ, ಎಂ.ತಿಮ್ಮಯ್ಯ, ಕೆ.ನರಸಿಂಹಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಂಸ್ಕೃತ ವಿವಿಯ ಕುಲಪತಿ ಡಾ.ಪದ್ಮಾಶೇಖರ್, ಸಾಹಿತಿ ಬೈರಮಂಗಲ ರಾಮೇಗೌಡ, ಬೆಂ.ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಗಾಂಧಿನಗರ ಕಸಾಪ ಅಧ್ಯಕ್ಷೆ ಮಂಜುಳಾ ಮಹಾದೇವಮ್ಮ, ಶ್ರೀಧರ್, ಪಾಲಿಕೆ ಸದ್ಯಸರಾದ ಆರ್.ಸಿ.ಸತ್ಯನಾರಾಯಣ, ಲತಾ ನವೀನ್‌ಕುಮಾರ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News