ಗಾಂಜಾ ಆಯಿಲ್ ಮಾರಾಟ ದಂಧೆ: ಇಬ್ಬರ ಬಂಧನ, 6 ಕೆಜಿ ಗಾಂಜಾ ಆಯಿಲ್ ವಶ
ಬೆಂಗಳೂರು, ಜು. 30: ಮಾದಕ ವಸ್ತು ಗಾಂಜಾ ಆಯಿಲ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಹೊರರಾಜ್ಯದ ಇಬ್ಬರನ್ನು ಬಂಧಿಸಿ, 6 ಕೆಜಿ 561 ಗ್ರಾಂ ತೂಕದ ಗಾಂಜಾ ಆಯಿಲ್ ವಶಪಡಿಸಿಕೊಳ್ಳುವಲ್ಲಿ ಇಲ್ಲಿನ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ತಾಲಿಪರಿಂಬಿಯಾ ತಾಲೂಕಿನ ಅಲಕೋಡಿ ಗ್ರಾಮದ ಜಾನ್ಸನ್ ಜೋಸೆಫ್(31), ಇಡುಕ್ಕಿ ತಾಲೂಕಿನ ಬೀಜು ಅಬ್ರಹಾಂ(38) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ನಗರದ ತಾವರೆಕೆರೆ ಬಸ್ ನಿಲ್ದಾಣ ಸಮೀಪದ ಆಲದಮರದ ಕಟ್ಟೆಯ ಬಳಿ ಗಾಂಜಾ ಆಯಿಲ್ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇರಳ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಗಾಂಜಾ ಆಯಿಲ್ನನ್ನು ಹೆಚ್ಚಾಗಿ ಉತ್ಪತ್ತಿ ಮಾಡಲಾಗುತ್ತದೆ. ಒಂದು ಕೆಜಿ ಗಾಂಜಾ ಆಯಿಲ್ ಉತ್ಪತ್ತಿ ಮಾಡಲು ಸುಮಾರು 6 ಕೆಜಿ ಹಸಿ ಗಾಂಜಾ ಸೊಪ್ಪನ್ನು ಬಳಸಲಾಗುತ್ತದೆ. ಇದು ದ್ರವರೂಪದ ಮಾದಕ ವಸ್ತುವಾಗಿದ್ದು, ಕೇರಳ ರಾಜ್ಯದ ಮಲೆನಾಡು ಪ್ರದೇಶದಿಂದ ಆರೋಪಿಗಳು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಮುಂದಾಗಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ತಿಳಿದುಬಂದಿದೆ. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಸುದ್ದುಗುಂಟೆ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.