×
Ad

ಪ್ರತಿಭಟನೆ ಗೊಂದಲಕ್ಕೆ ಜಿಲ್ಲಾಡಳಿತವೇ ಹೊಣೆ: ಬಸವರಾಜ ದೇವರು ಸ್ವಾಮಿ

Update: 2017-07-30 17:58 IST

ಹುಬ್ಬಳ್ಳಿ, ಜು. 30: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸಲು ಆಗ್ರಹಿಸಿ ನಿನ್ನೆ ಬಾಗಲಕೋಟೆಯಲ್ಲಿ ನಡೆದ ಪ್ರತಿಭಟನೆ ವೇಳೆ ಉಂಟಾದ ನೂಕುನುಗ್ಗಲು, ಗೊಂದಲಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಧಾರವಾಡ ರೇವಣ್ಣ ಸಿದ್ದೇಶ್ವರ ಮಠದ ಬಸವರಾಜ ದೇವರು ಸ್ವಾಮೀಜಿ ಆರೋಪಿಸಿದ್ದಾರೆ.

ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಕಾರರನ್ನು ಜಿಲ್ಲಾಡಳಿತ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದು, ಏಕಾಏಕಿ ಲಾಠಿ ಪ್ರಹಾರ ನಡೆಸಲಾಗಿದೆ ಎಂದು ದೂರಿದರು.
ನಿನ್ನೆ ನಡೆದ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯನ್ನು ಅಮಾನತ್ತು ಮಾಡಬೇಕು. ಪ್ರತಿಭಟನಾಕಾರರ ಮೇಲೆ ದಾಖಲಿಸಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸಲು ಆಗ್ರಹಿಸಿ ಆಗಸ್ಟ್ 6ರಂದು ಜನ ಜಾಗೃತಿ ಜಾಥಾ ನಡೆಸಲಾಗುವುದು ಎಂದ ಅವರು, ಸಮುದಾಯದ ಶಾಸಕರು, ಜನಪ್ರತಿನಿಧಿಗಳ ನಿವಾಸಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಸ್ವಾಮೀಜಿ ಇದೇ ವೇಳೆ ಎಚ್ಚರಿಸಿದರು.
ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಸಿಗಬೇಕೆಂಬುದರಲ್ಲಿ ಯಾವುದೇ ಆಕ್ಷೇಪ ಇಲ್ಲ. ಅದೇ ರೀತಿಯಲ್ಲಿ ಹಿಂದುಳಿದ ಕುರುಬ ಸಮುದಾಯಕ್ಕೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು. ಎಂದ ಅವರು, ದೇಶದಲ್ಲಿ 16 ಕೋಟಿ ಕುರುಬ ಸಮಾಜದವರಿದ್ದಾರೆ. ಅವರೆಲ್ಲರಿಗೂ ಪ್ರತ್ಯೇಕ ಧರ್ಮ ಸಿಗಲೇಬೇಕು ಎಂದರು.

ಪ್ರತಿಭಟನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳ ಪುಡಿಗೈದು, ನಾಮಫಲಕ ಕಿತ್ತೆಸೆದ ಪ್ರಕರಣ ಸಂಬಂಧ ರೇವಣ್ಣ ಸಿದ್ದೇಶ್ವರ ಮಠದ ಬಸವರಾಜ ದೇವರು ಸ್ವಾಮಿ ಸೇರಿದಂತೆ ಕುರುಬ ಸಮುದಾಯದ ಮುಖಂಡರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲು ಮಾಡಿದ್ದಾರೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News