×
Ad

ರಂಗಕರ್ಮಿ ಶ್ರೀರಂಗರ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಡಾ.ಗಿರಡ್ಡಿ ಗೋವಿಂದರಾಜು ಆಗ್ರಹ

Update: 2017-07-30 18:01 IST

ಬೆಂಗಳೂರು, ಜು. 30: ಧಾರವಾಡದ ರಂಗಾಯಣದಲ್ಲಿ ಹಿರಿಯ ರಂಗಕರ್ಮಿ ಶ್ರೀರಂಗರ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಬೇಕು ಎಂದು ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜು ಆಗ್ರಹಿಸಿದ್ದಾರೆ.

ರವಿವಾರ ಸಿರಿವರ ಪ್ರಕಾಶನ ಹಾಗೂ ಶ್ರೀರಂಗ ಸಂಪದ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಹಿರಿಯ ರಂಗವಿನ್ಯಾಸಕ ಎಚ್.ವಿ. ವೆಂಕಟಸುಬ್ಬಯ್ಯ ರಚಿತ ‘ಶ್ರೀರಂಗ ಸಂಪದ’ ಸಂಪುಟ ಹಾಗೂ ಸುಬ್ಬಣ್ಣ-80 ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕರ್ನಾಟಕ ರಂಗಭೂಮಿಯ ಸೃಜನಾತ್ಮಕತೆಗೆ ಶ್ರೀರಂಗರ ಕೊಡುಗೆ ಅಪಾರ. ಹವ್ಯಾಸಿ ರಂಗಭೂಮಿಯನ್ನು ಕಟ್ಟಿ ವಿಭಿನ್ನವಾದ ಕತಾವಸ್ತುಗಳನ್ನು ರಂಗಭೂಮಿಗೆ ತಂದು ನಾಟಕ ಕ್ಷೇತ್ರವನ್ನು ಬೆಳಗಿಸಿದವರು. ಅವರ ಅಪಾರ ಶ್ರದ್ಧೆಯ ಫಲವಾಗಿ ಇವತ್ತು ಕನ್ನಡ ರಂಗಭೂಮಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಹಿರಿಯ ರಂಗಕರ್ಮಿ ಶ್ರೀರಂಗರು ಹವ್ಯಾಸಿ ರಂಗಭೂಮಿಗಾಗಿ ತಾವೇ ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ. ಅವರು ಪ್ರಜಾವಾಣಿ, ರಾಜಹಂಸ ಸೇರಿದಂತೆ ಹಲವು ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ನೂರಾರು ಲೇಖನಗಳು ಪ್ರಕಟಗೊಂಡಿವೆ. ಹೀಗಾಗಿ ಅವರ ಸಮಗ್ರ ಬರಹಗಳನ್ನು ಒಂದು ಉಪಯುಕ್ತ ಸ್ಥಳದಲ್ಲಿ ಸಂಗ್ರಹಿಸಿ ಮುಂದಿನ ಪೀಳಿಗೆಗೆ ಜೋಪಾನವಾಗಿಡುವುದು ಅಗತ್ಯವಿದೆ ಎಂದು ಅವರು ಆಶಿಸಿದರು.

ಹಿರಿಯ ಸಾಹಿತಿ ಡಾ.ಜೆ.ಶ್ರೀನಿವಾಸ ಮೂರ್ತಿ ಮಾತನಾಡಿ, ರಂಗಕರ್ಮಿ ಶ್ರೀರಂಗರು ಪಾಂಡಿತ್ಯದ ಬಗ್ಗೆ ತಳ ಸ್ಪರ್ಶಿಯಾಗಿ ಅಧ್ಯಯನ ಮಾಡಿದವರು. ವರ್ತ ಮಾನದ ತಲ್ಲಣಗಳಿಗೆ ಸ್ಪಧಿಸುತ್ತಿದ್ದ ರೀತಿ ನಮ್ಮೆಲ್ಲರಿಗೂ ಮಾದರಿಯಾದದ್ದು. ಸಾಹಿತ್ಯದ ಜೊತೆಗೆ ರಾಜಕೀಯದ ಕುರಿತು ಅಪಾರ ಆಸಕ್ತಿಯನ್ನು ಹೊಂದಿದ್ದರು ಎಂದು ಸ್ಮರಿಸಿದರು.

ಇವತ್ತು ಏಕರೂಪವಾದ ಭಾರತೀಯ ಪರಿಕಲ್ಪನೆಗಳನ್ನು ಒತ್ತಾಯ ಪೂರ್ವಕವಾಗಿ ಹೇರಲಾಗುತ್ತಿದೆ. ಆ ಮೂಲಕ ಬಹುಸಂಸ್ಕೃತಿ, ಬಹುತತ್ವಗಳನ್ನು ನಿರ್ಣಾಮ ಮಾಡುವಂತಹ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ. ಬುದ್ಧಿಜೀವನಗಳನ್ನು ಹಾಗೂ ಅವರ ಜ್ಞಾನವನ್ನು ಅವಹೇಳನ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೀರಂಗರಾಯರ ಚಿಂತನೆಗಳು ಪ್ರಸ್ತುತವಾಗುತ್ತವೆ ಎಂದು ಅವರು ಹೇಳಿದರು.

ಹಿರಿಯ ರಂಗಕರ್ಮಿ ಎಚ್.ವಿ.ವೆಂಕಟಸುಬ್ಬಯ್ಯ ಮಾತನಾಡಿ, ನಾನೊಬ್ಬ ರಂಗಭೂಮಿಯ ಪರಿಚಾರಕ. ಹೀಗಾಗಿ ರಂಗಾಭೂಮಿಗೆ ಅಪಾರ ಕೊಡುಗೆ ನೀಡಿದ ಶ್ರೀರಂಗರ ಬದುಕು. ಬರಹಗಳನ್ನು ಒಟ್ಟುಗೂಡಿಸಿ ಯುವಪೀಳಿಗೆಗೆ ತಲುಪಿಸುವುದು ನನ್ನ ಕರ್ತತ್ಯ. ಹೀಗಾಗಿ ‘ಶ್ರೀರಂಗ ಸಂಪದ’ ಸಂಪುಟವನ್ನು ಸಂಪಾಧಿಸಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಶ್ರೀರಂಗರ ಮಕ್ಕಳಾದ ಉಷಾ ದೇಸಾಯಿ, ಶಶಿ ದೇಶಪಾಂಡೆ, ಹಿರಿಯ ರಂಗಕಲಾವಿದೆ ಬಿ.ಜಯಶ್ರೀ, ಸೋಮಶೇಖರ ಮಂದಗೆರೆ ಹಾಗೂ ಸಿರಿವರ ಪ್ರಕಾಶನದ ರವೀಂದ್ರನಾಥ ಸಿರಿವರ ಮತ್ತಿತರರಿದ್ದರು.

 ‘ಇತ್ತೀಚಿಗೆ ರಂಗಭೂಮಿಗೆ ಬರುವ ಕಲಾವಿದರು ಒಂದು ನಾಟಕದಲ್ಲಿ ಪಾತ್ರ ಮಾಡಿದ ತಕ್ಷಣ ನಾಯಕನಾಗಬೇಕು. ನಾಡಿನಾದ್ಯಂತ ಪ್ರಸಿದ್ಧಿಯಾಗಬೇಕೆಂದು ಬಯಸುತ್ತಾರೆ. ಇದು ಸಾಧ್ಯವಾಗದ ಕಾರಣ ಒಂದು-ಎರಡು ನಾಟಕದಲ್ಲಿ ಆಭಿನಯ ಮಾಡಿ ಮರೆಯಾಗುತ್ತಾರೆ. ಇಂತವರಿಗೆ ರಂಗಭೂಮಿಗಾಗಿ ಅಪಾರ ತ್ಯಾಗ ಮಾಡಿದ ಶ್ರೀರಂಗರು, ಬಿ.ವಿ.ಕಾರಂತ, ಶಿವರಾಮಕಾರಂತ ಸೇರಿದಂತೆ ಹಿರಿಯ ರಂಗಕರ್ಮಿಗಳ ಬದುಕನ್ನು ತಿಳಿಸುವುದು ಅಗತ್ಯ’
-ಬಿ.ಜಯಶ್ರೀ, ಹಿರಿಯ ಕಲಾವಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News