ನಾಡಗೀತೆಯಂತೆ ಕನ್ನಡಕ್ಕೆ ಪ್ರತ್ಯೇಕ ಧ್ವಜದ ಮಾನ್ಯತೆ: ದಿನೇಶ್ ಗುಂಡೂರಾವ್
ಬೆಂಗಳೂರು, ಜು. 30: ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆ ಹೇಗೆ ಅಧಿಕೃತಗೊಳಿಸಲಾಗಿದೆಯೋ, ಅದೇ ರೀತಿ, ಕನ್ನಡ ಪ್ರತ್ಯೇಕ ಧ್ವಜಕ್ಕೆ ಮಾನ್ಯತೆ ನೀಡಲಾಗುವುದು. ಇದರಲ್ಲಿ ಪ್ರತ್ಯೇಕವಾದದ ಮಾತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ನಗರದ ರೇಣುಕಾಚಾರ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ನಾಲ್ಕನೆ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟದಲ್ಲಿ ಕನ್ನಡ ಧ್ವಜ ಈಗಾಗಲೇ ಇದೆ. ಆದರೆ, ರಾಜ್ಯ ಸರಕಾರ ಇದನ್ನು ಅಧಿಕೃತಗೊಳಿಸುವ ಉದ್ದೇಶ ಹೊಂದಿದೆ ವಿನಃ, ಪ್ರತ್ಯೇಕತೆಗೆ ಮುಂದಾಗಿಲ್ಲ ಎಂದು ನುಡಿದರು.
ದೇಶಕ್ಕೆ ರಾಷ್ಟ್ರಗೀತೆ, ರಾಜ್ಯಕ್ಕೆ ನಾಡಗೀತೆ ಅಧಿಕೃತವಾಗಿದೆ. ಇನ್ನು ಕನ್ನಡ ಧ್ವಜವೂ ಅಧಿಕೃತಗೊಂಡರೆ, ಯಾರ ಮೇಲಿರುವ ಗೌರವ ಕಡಿಮೆ ಆಗುವುದಿಲ್ಲ. ಈ ಬಗ್ಗೆ ಸುಮ್ಮನೆ ವಿವಾದ ಸೃಷ್ಟಿಸುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿಯೂ ಅಲ್ಲ ಎಂದು ದಿನೇಶ್‌ಗುಂಡೂರಾವ್ ಹೇಳಿದರು.
ಹಿಂದಿ ಬೇಡ: ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಸರಿಯಲ್ಲ, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಪತ್ರಬರೆದು, ತ್ರಿಭಾಷೆ ಸೂತ್ರ ಬೇಡವೆಂದು ಹೇಳಿದ್ದಾರೆ. ಅಲ್ಲದೆ, ಹೊರ ರಾಜ್ಯದವರು ಎಲ್ಲೂ ಹಿಂದಿ ಬೇಕೆಂದು ಬೇಡಿಕೆಯಿಟ್ಟಿಲ್ಲ. ಅನಗತ್ಯವಾಗಿ ಹಿಂದಿ ಬೇಕೆಂದು ವಿವಾದ ಹುಟ್ಟು ಹಾಕಲಾಗಿದ್ದು, ಹಿಂದಿ ಹೇರಿಕೆ ವಿರುದ್ಧ ನಡೆಯುತ್ತೀರುವ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು.
ರಾಜ್ಯ ಸರಕಾರ ಕನ್ನಡ ಭಾಷೆ ಉಳಿಸಿ, ಬೆಳಸುವ ಕಾಯಕ ಹೊಂದಿದೆ. ಇತ್ತೀಚಿಗೆ ಕನ್ನಡ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗಿದೆ ಎಂದ ಅವರು, ಹೊರರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವರು ಇಲ್ಲಿನ ಸ್ಥಳೀಯ ಭಾಷೆ ಕಲಿಯಲು ಮುಂದಾಗಬೇಕು. ಇದರಿಂದ ಸ್ಥಳೀಯ ಭಾಷೆಗಳು ಶಾಶ್ವತವಾಗಿ ಉಳಿಯಲಿವೆ ದಿನೇಶ್ ಗುಂಡೂರಾವ್ ಹೇಳಿದರು.