ಮಾನವ ಕಳ್ಳ ಸಾಗಾಣಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಡಿಜಿಪಿ ಆರ್.ಕೆ.ದತ್ತ
ಬೆಂಗಳೂರು, ಜು. 30: ಮಾನವ ಕಳ್ಳ ಸಾಗಾಣೆಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾದ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ ದತ್ತ ಇಂದಿಲ್ಲಿ ಆಭಯ ನೀಡಿದ್ದಾರೆ.
ರವಿವಾರ ಅಂತರಾಷ್ಟ್ರೀಯ ವಿಶ್ವ ಮಾನವ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಯೂನಿಸೆಫ್ ಸಂಯುಕ್ತಾಶ್ರಯದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಾಗಾಣಿಕೆ ತಡೆ ಕುರಿತ ಜಾಗೃತ ರ್ಯಾಲಿ ‘ಫ್ರೀಡಂ ರೈಡ್’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವ ಸಾಗಾಣಿಕೆಯಲ್ಲಿ ದೇಶದಲ್ಲಿ ರಾಜ್ಯ 5ನೆ ಸ್ಥಾನದಲ್ಲಿದೆ. ಮಾನವ ಕಳ್ಳಸಾಗಣಿಕೆಯನ್ನು ಸಂಪೂರ್ನವಾಗಿ ತಡೆಗಟ್ಟಲು ಪೊಲೀಸ್ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ. ಹೀಗಾಗಿ ಮುಂದಿನ ತಿಂಗಳು ಮಾನವ ಸಾಗಾಣಿಕೆ ತಡೆಯುವ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆಯನ್ನು ಹಮ್ಮಿಕೊಂಡು ಕಾರ್ಯತಂತ್ರಗಳನ್ನು ರೂಪಿಸಲಾಗುವುದುಎಂದು ತಿಳಿಸಿದರು.
ದೇಶದಲ್ಲಿ ನಡೆಯುತ್ತಿರುವ ಮಾನವ ಸಾಗಾಣಿಕೆಯಲ್ಲಿ ಶೇ.77ರಷ್ಟು ಮಹಿಳೆಯರು ಮತ್ತು ಮಕ್ಕಳು ಇದ್ದಾರೆ. ಅವರನ್ನು ಹೆಚ್ಚಾಗಿ ಲೈಂಗಿಕ ಶೋಷಣೆ ಮತ್ತು ಬಿಕ್ಷಾಟನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವ ಮಾತನಾಡಿ, ಮಕ್ಕಳ ಕಳ್ಳ ಸಾಗಾಟಣೆಯನ್ನು ತಡೆಯಲು ಪೊಲೀಸ್ ಇಲಾಖೆಯ ಜೊತೆಗೆ ಸಮಾಜವು ಹೆಚ್ಚು ಜಾಗೃತಿಯಿಂದ ಇರಬೇಕು. ಮಕ್ಕಳ ಕಳ್ಳರ ಬಗ್ಗೆ ಪೋಷಕರು ಹೆಚ್ಚು ಜಾಗೃತರಾಗಿರಬೇಕು ಎಂದು ತಿಳಿಸಿದರು.
ರ್ಯಾಲಿಯು ಬೆಂಗಳೂರು ನಗರದಿಂದ ದಾವಣಗೆರೆ ಮಾರ್ಗವಾಗಿ ಬೆಳಗಾವಿಯವರೆಗೂ ಸಾಗಿತು.ಕಾರ್ಯಕ್ರಮದಲ್ಲಿ ಯೂನಿಸೆಫ್ ಅಧಿಕಾರಿ ಸೋನಿಕಟ್ಟಿ ಜಾರ್ಜ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಭಾವ ಸೇರಿದಂತೆ ಇತರರು ಉಪಸ್ಥಿತರಿದ್ದರು.