ಶಾಸಕರಿಗೆ ತಲಾ 15 ಕೋಟಿ ರೂ.ಆಮಿಷ: ಶಕ್ತಿಸಿಂಗ್ ಗೋಯೆಲ್ ಆರೋಪ
ಬೆಂಗಳೂರು, ಜು. 30: ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಡೆಯಲು ಬಿಜೆಪಿ, 22 ಶಾಸಕರ ಖರೀದಿಗೆ ಮುಂದಾಗಿದೆ. ಅಲ್ಲದೆ, ತಲಾ 15 ಕೋಟಿ ರೂ.ಗಳ ಹಣದ ಆಮಿಷವೊಡ್ಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಗುಜರಾತ್ ಶಾಸಕ ಶಕ್ತಿ ಸಿಂಗ್ ಗೋಯೆಲ್ ಆರೋಪ ಮಾಡಿದ್ದಾರೆ.
ರವಿವಾರ ಬಿಡದಿ ಸಮೀಪದ ಈಗಲ್ ಟನ್ ರೆಸಾರ್ಟ್‌ನಲ್ಲಿ ಗುಜರಾತ್ ಶಾಸಕರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಒಡೆಯಲು ಬಿಜೆಪಿಯು ಸಿಬಿಐ, ಇಡಿ ಮೂಲಕ ನಮ್ಮ ಮುಖಂಡರ ಮೇಲೆ ದಾಳಿ ನಡೆಸುತ್ತಿದೆ ಎಂದು ಆಪಾದಿಸಿದರು.
ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಆಗಸ್ಟ್ 8ರಂದು ಮತದಾನ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸೇರಿದಂತೆ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ, ಬಿಜೆಪಿ ತನ್ನ ಅಭ್ಯರ್ಥಿಗಳ ಗೆಲುವಿಗಾಗಿ ಕುದುರೆ ವ್ಯಾಪಾರಕ್ಕೆ ಇಳಿದಿದೆ. ಸದ್ಯ ಗುಜರಾತ್‌ನಲ್ಲಿ ತೀವ್ರ ಮಳೆಯಿಂದ ಉಂಟಾಗಿರುವ ಪ್ರವಾಹ ಸ್ಥಿತಿ ನಿವಾರಣೆ ಮಾಡುವಲ್ಲಿ ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲಗೊಂಡಿದ್ದು, ಪ್ರವಾಹ ನಿಯಂತ್ರಣಕ್ಕೆ ಒತ್ತು ನೀಡುವ ಬದಲು ಶಾಸಕರ ಖರೀದಿಗೆ ಒತ್ತು ನೀಡಿದೆ ಎಂದು ಎಂದು ದೂರಿದರು.
ನಮಗೆ ಬೆಂಗಳೂರಿಗೆ ಬರಲು ಇಚ್ಚೆ ಇರಲಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ತುರ್ತು ಕಾರ್ಯಗಳನ್ನು ಕೈಗೊಳ್ಳುವಂತೆ ಅಹ್ಮದ್ ಪಟೇಲ್ ಸೂಚಿಸಿದ್ದರು. ನಾವು ಗುಜರಾತ್‌ನಲ್ಲಿಯೇ ಉಳಿಯಲು ಬಯಸಿದ್ದೆವು. ಆದರೆ, ಐಪಿಎಸ್ ಅಧಿಕಾರಿ ಮೂಲಕ ನಮ್ಮ ಶಾಸಕರಿಗೆ ಹಣದ ಆಮಿಷವೊಡ್ಡಲಾಯಿತು. ಹೀಗಾಗಿ ಗುಜರಾತ್‌ನಲ್ಲಿ ಇರುವುದು ಸೂಕ್ತ ಅಲ್ಲ ಎಂಬ ಕಾರಣಕ್ಕೆ ವಾಸ್ತವ್ಯ ಬದಲಾಯಿಸಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಒಗ್ಗಟ್ಟಾಗಿದ್ದೇವೆ ಯಾರನ್ನೂ ಬಲವಂತದಲ್ಲಿ ಬೆಂಗಳೂರಿನಲ್ಲಿ ಇರಿಸಿಲ್ಲ. ನಮಗೆ ಸಂಖ್ಯಾಬಲ ಇದ್ದು, ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ. ಬಿಜೆಪಿಗೆ ಸಂಖ್ಯಾಬಲ ಇಲ್ಲ. ಹೀಗಾಗಿ ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಳ್ಳಲು ಅಡ್ಡಹಾದಿ ಹಿಡಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.