ಮುತ್ಸದ್ಧಿ ರಾಜಕಾರಣಿಗಳಿಂದ ಭ್ರಷ್ಟಾಚಾರ ಬೆಳೆಯುತ್ತಿದೆ: ಎಂ.ವಿ.ರಾಜಶೇಖರನ್
ಬೆಂಗಳೂರು, ಜು.30: ದೇಶದಲ್ಲಿ ಭ್ರಷ್ಟಾಚಾರ, ದ್ವೇಷ, ಅಸೂಯೆ ಬೆಳೆಯಲು ಪ್ರಭಾವಿ, ಮುತ್ಸದ್ಧಿ ರಾಜಕಾರಣಿಗಳು ಎಂದೆನಿಸಿಕೊಂಡವರೇ ಕಾರಣ ಎಂದು ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಇಂಟರ್ ನ್ಯಾಷನಲ್ ಇಂಟಿಗ್ರಿಟಿ, ಪೀಸ್ ಆ್ಯಂಡ್ ಫ್ರೆಂಡ್‌ಶಿಪ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ‘ಮದರ್ ತೆರೆಸಾ ಎಕ್ಸಲೆನ್ಸ್ ಅವಾರ್ಡ್’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಾತಿ, ಧರ್ಮವನ್ನು ಒಡೆಯುವ ಮೂಲಕ ದ್ವೇಷ, ಅಸೂಯೆ ವಾತಾವರಣ ನಿರ್ಮಾಣ ಮಾಡಿ, ಮಾನವ ಜನಾಂಗ ತಲೆ ತಗ್ಗಿಸುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.
ವಿಶ್ವದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ತಂತ್ರಜ್ಞಾನ, ವಿಜ್ಞಾನದಂತಹ ಅಭಿವೃದ್ಧಿಯಲ್ಲಿ ಅಪಾರವಾದ ಬೆಳವಣಿಗೆ ಕಂಡಿದೆ. ವಿಶ್ವಕ್ಕೆ ಗಣಿತ ನೀಡಿದವರು, ಗ್ರಹಗಳ ಚಲನತೆ ಕಂಡು ಹಿಡಿದವರು ಭಾರತೀಯರು. ಹೀಗಾಗಿ, ವಿಶ್ವಕ್ಕೆ ಮಾದರಿಯಾದ ಭಾರತವನ್ನು ನಿರ್ಮಾಣ ಮಾಡಬೇಕಾದರೆ ಯುವ ಜನರ ಪಾತ್ರ ಮಹತ್ವವಾದುದು. ಆದುದರಿಂದ ಸಾಧನೆ ಮಾಡಿರುವ, ಮಾಡುತ್ತಿರುವವರನ್ನು ಪ್ರೋತ್ಸಾಹಿಸಬೇಕಿದೆ ಎಂದು ಅವರು ಹೇಳಿದರು.
ಭಾರತ ವಿಶ್ವದ ರಾಷ್ಟ್ರಗಳಲ್ಲಿ ವಿಶಿಷ್ಟವಾದ ಸ್ಥಾನ ಪಡೆದಿದೆ. ವಿಶ್ವದಲ್ಲಿನ 48 ನಾಗರೀಕತೆಯಲ್ಲಿ ಹಲವು ದೇಶಗಳ ನಾಗರೀಕತೆ ಅಳಿವಿನ ಅಂಚಿಗೆ ಬಂದು ತಲುಪಿದ್ದರೂ, ನಮ್ಮ ದೇಶದ ನಾಗರೀಕತೆ ಮಾದರಿಯಾಗಿ ಉಳಿದುಕೊಳ್ಳುವ ಮೂಲಕ ಇಂದಿಗೂ ಜೀವಂತವಾಗಿದೆ ಎಂದರು.
ಭಾರತದ ನಾಗರೀಕತೆಗೆ ಕೆಲವರು ಐದು ಸಾವಿರ ವರ್ಷಗಳು, 10 ಸಾವಿರ ವರ್ಷಗಳ ಇತಿಹಾಸವಿದೆ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ. ಆದರೆ, ನಮ್ಮ ದೇಶದ ನಾಗರೀಕತೆಗೆ ಸಾವಿರಾರು ವರ್ಷಗಳ ಇತಿಹಾಸ ಕುರಿತು ಗೊಂದಲವಿದೆ. ಇದು ನಿವಾರಣೆಯಾಗಬೇಕಾದರೆ ನಮ್ಮ ನಾಗರೀಕತೆಯ ಮರು ಸಂಶೋಧನೆ ನಡೆಯಬೇಕು ಎಂದು ಅವರು ಮನವಿ ಮಾಡಿದರು.
ಭಾರತವು ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತದೆ. ವಿಶ್ವವೇ ಒಂದು ಕುಟುಂಬ ಎಂದು ಭಾವಿಸುತ್ತದೆ. ಇಡೀ ವಿಶ್ವದಲ್ಲಿ ಯಾವುದೇ ಧರ್ಮಗಳಿಗೆ ಚ್ಯುತಿ ಬಂದರೆ ಭಾರತ ಆಶ್ರಯ ನೀಡುತ್ತದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ರಾಮೇಶ್ ಕಾಮತ್ ಉಪಸ್ಥಿತರಿದ್ದರು. ಇದೇ ವೇಳೆ ಎಚ್.ಆರ್.ಕೃಷ್ಣಕುಮಾರ್ ಹೊಂಗೆರೆ, ಶಂಕರಗೌಡ ಬಿ ಬೀರದರ್ ಗೆ ‘ಮದರ್ ತೆರೆಸಾ ಎಕ್ಸಲೆನ್ಸ್ ಅವಾರ್ಡ್’ ಹಾಗೂ ಡಾ.ಡಿ.ಕೃಷ್ಣಮೂರ್ತಿ ಮತ್ತು ಎಂ.ಎಸ್.ಮಂಜುನಾಥ ಅವರಿಗೆ ‘ಭಾರತ್ ಜ್ಯೋತಿ ಅವಾರ್ಡ್’ ನೀಡಿ ಗೌರವಿಸಲಾಯಿತು.