×
Ad

ಭಾರತಕ್ಕಿಂತ ಚೀನಾದ ಆಡಳಿತ ವ್ಯವಸ್ಥೆ ಉತ್ತಮ: ಕೆ.ಎಚ್.ಮುನಿಯಪ್ಪ

Update: 2017-07-30 20:03 IST

ಬೆಂಗಳೂರು, ಜು.30: ಭಾರತಕ್ಕಿಂತ ಜಪಾನ್ ಹಾಗೂ ಚೀನಾದ ಆಡಳಿತ ವ್ಯವಸ್ಥೆ ಉತ್ತಮವಾಗಿದ್ದು, ಜಗತ್ತಿನ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ಆ ರಾಷ್ಟ್ರಗಳು ಮುಂಚೂಣಿಯಲ್ಲಿವೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅಭಿಪ್ರಾಯಿಸಿದ್ದಾರೆ.

ರವಿವಾರ ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಐಎಎಸ್ ಹಾಗೂ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

1962ರಲ್ಲಿ ಚೀನಾದಲ್ಲಿ ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ಇತ್ತು. ಆದರೆ, ಈಗ ಅಮೇರಿಕಾ ಹಾಗೂ ರಷ್ಯಾದೊಂದಿಗೆ ಸ್ಪರ್ಧೆಗೆ ಇಳಿಯುವಷ್ಟರ ಮಟ್ಟಿಗೆ ಅಭಿವೃದ್ಧಿಗೊಂಡಿದೆ. ಇದು ಆ ದೇಶದ ಆಡಳಿತ ವ್ಯವಸ್ಥೆಯ ದಕ್ಷತೆಗೆ ಸಾಕ್ಷಿಯಾಗಿದೆ. ಹಾಗೆಯೇ ಅಣುಬಾಂಬ್ ದಾಳಿಯಿಂದ ನಜ್ಜುಗುಜ್ಜಾಗಿದ್ದ ಜಪಾನ್ ಪ್ರಸ್ತುತ ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನು ಸಾಧಿಸಿದೆ ಎಂದು ಅವರು ಹೇಳಿದರು.

ಭಾರತದ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಮ್ಮ ಕಂಪೆನಿಗಳನ್ನು ಬಂದ್ ಮಾಡಿ ಹೋರಾಟ ಮಾಡುತ್ತಾರೆ. ಆದರೆ, ಜಪಾನ್ ಕಾರ್ಮಿಕರ ಹೋರಾಟದ ಸ್ವರೂಪವೇ ಭಿನ್ನವಾಗಿದೆ. ತಮ್ಮ ಕೈಗಳಿಗೆ ಕಪ್ಪುಬಟ್ಟೆಯನ್ನು ಕಟ್ಟಿಕೊಂಡು ಉತ್ಪಾದನೆಯನ್ನು ದ್ವಿಗುಣಗೊಳಿಸುತ್ತಾರೆ. ಇಂತಹ ಉತ್ತಮ ಗುಣಗಳನ್ನು ದೇಶದ ಜನತೆಯು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ನಮ್ಮ ವ್ಯವಸ್ಥೆಯಲ್ಲಿ ಅನೇಕ ದೌರ್ಬಲ್ಯಗಳಿದ್ದರೂ ಅಧಿಕಾರಿ ವರ್ಗ ತಮ್ಮ ಕೆಲಸಗಳನ್ನು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿದರೆ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬಹುದು. ಪ್ರಸ್ತುತ ದೇಶದಲ್ಲಿ ಅತ್ಯಂತ ಪ್ರಮಾಣಿಕ ಅಧಿಕಾರಿಗಳು ಸಾಕಷ್ಟು ಮಂದಿ ಇದ್ದಾರೆ. ಅವರ ಹಾದಿಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಸಾಗಬೇಕು ಎಂದು ಅವರು ಆಶಿಸಿದರು.

ವಸತಿ ಸಚಿವ ಎಂ.ಕೃಷ್ಣಪ್ಪ ಮಾತನಾಡಿ, ಜನಪರ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ. ಕಾನೂನಿಗಿಂತ ಜನರ ಹಿತವೇ ಮುಖ್ಯ ಎಂಬುದನ್ನು ಅಧಿಕಾರಿಗಳು ಮನಗಾಣಬೇಕು. ಅಗತ್ಯವಿದ್ದರೆ ಕಾನೂನಿನಲ್ಲಿ ತಿದ್ದುಪಡಿ ತಂದು ಜನರ ಹಿತವನ್ನು ಕಾಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ್, ಕೆವಿಟಿಎಸ್‌ಡಿಸಿ ಅಧ್ಯಕ್ಷ ಮುರಳಿಧರ್ ಹಾಲಪ್ಪ, ಬಂಟರ ಸಂಘದ ಅಧ್ಯಕ್ಷ ಡಿ.ಚಂದ್ರಹಾಸ ರೈ, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ನಾಗಾಂಬಿಕದೇವಿ, ಹಣಕಾಸು ಇಲಾಖೆಯ ಜಂಟಿ ಆಯುಕ್ತ ನರಸಿಂಹರಾಜು, ಡಿಸಿಪಿ ಶೋಭಾ ರಾಣಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News