ಅತ್ಯಾಚಾರಿಯನ್ನೇ ಅನಿವಾರ್ಯವಾಗಿ ವಿವಾಹವಾದ ಬಾಲಕಿ

Update: 2017-07-31 04:04 GMT

ಬರೇಲಿ, ಜು.31: ಈಕೆ ಇನ್ನೂ ಹದಿನಾಲ್ಕರ ಬಾಲೆ. ಪುಟ್ಟ ತಾಯಿ. ಯುವಕನೊಬ್ಬನಿಂದ ಅತ್ಯಾಚಾರಕ್ಕೆ ಒಳಗಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ತಿಂಗಳ ಹಿಂದೆ ಆಕೆಯ ವಿವಾಹವೂ ಆಗಿದೆ. ದುರದೃಷ್ಟವೆಂದರೆ ಆಕೆ ವಿವಾಹವಾಗಿರುವುದು ತನ್ನ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು!

20 ಸಾವಿರ ರೂಪಾಯಿ ಸಾಲದ ಹೊರೆ ಹೊಂದಿದ ಈಕೆಯ ತಂದೆಗೆ ಕುಟುಂಬದ ಎಂಟು ಮಂದಿಯ ಜತೆಗೆ ಬಾಲಕಿ ಮತ್ತು ಆಕೆಯ ಮಗುವನ್ನು ಸಾಕುವುದು ಕಷ್ಟವಾಗಿತ್ತು. ಮಗುವಿನ ಪಾಲನೆಗೆ ಸರ್ಕಾರದಿಂದ ನೆರವು ಕೋರಿದರೂ ಯಾವ ಪ್ರಯೋಜವೂ ಆಗಲಿಲ್ಲ. ಮಗುವಿನ ವೈದ್ಯಕೀಯ ವೆಚ್ಚ ಹಾಗೂ 50 ಕಿಲೋಮೀಟರ್ ದೂರದ ನ್ಯಾಯಾಲಯಕ್ಕೆ ಪ್ರತೀ ಬಾರಿಯೂ ಪ್ರಯಾಣ ಬೆಳೆಸುವ ವೆಚ್ಚ ಭರಿಸಲಾಗದೇ, ಊರ ಹಿರಿಯರ ಮಧ್ಯಸ್ಥಿಕೆಯಲ್ಲಿ ಕೊನೆಗೂ ತನ್ನ ಪುತ್ರಿ ಅತ್ಯಾಚಾರಿಯನ್ನು ವಿವಾಹವಾಗುವಂತೆ ಒಪ್ಪಿಸಿದರು.

"ನನ್ನ ಹಾಗೂ ಮಗುವಿನ ಉತ್ತಮ ಭವಿಷ್ಯದ ದೃಷ್ಟಿಯಿಂದ ವಿವಾಹಕ್ಕೆ ಒಪ್ಪಿಕೊಂಡೆ" ಎಂದು ಬಾಲಕಿ ಹೇಳಿದ್ದಾಳೆ.
ನ್ಯಾಯಾಲಯದಲ್ಲಿ ಸಂತ್ರಸ್ತೆ ಪರ ವಾದಿಸುತ್ತಿರುವ ವಕೀಲ ವಿ.ಪಿ.ಧ್ಯಾನಿ ಹೇಳುವಂತೆ "ಬಡತನ ಈ ಬಡಕುಟುಂಬವನ್ನು ಮತ್ತಷ್ಟು ದುರ್ಬಲಗೊಳಿಸಿದೆ. ಸಂತ್ರಸ್ತೆ ಬಾಲಕಿಗೆ ಪುನರ್ವಸತಿ ಕಲ್ಪಿಸಲು ಅಡಳಿತ ವಿಫಲವಾಗಿರುವುದಿಂದ, ಪ್ರಕರಣವನ್ನು ಮುಂದುವರಿಸದಿರಲು ಕುಟುಂಬ ನಿರ್ಧರಿಸಿತು. ನವದಂಪತಿ ಇದೀಗ ವಿವಾಹ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಅದು ಸಿಕ್ಕಿದ ತಕ್ಷಣ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ"

ಭವಿಷ್ಯದಲ್ಲಿ ಬಾಲಕಿಗೆ ಯಾವುದೇ ಕಿರುಕುಳ ನೀಡಿದರೆ ಅಥವಾ ಆಕೆಯನ್ನು ಮನೆಯಿಂದ ಹೊರಹಾಕಿದರೆ, ಮತ್ತೆ ನ್ಯಾಯಾಲಯದ ಮೊರೆ ಹೋಗುವುದಾಗಿ ವರನ ಜತೆ ಬಾಲಕಿಯ ತಂದೆ ಒಪ್ಪಂದ ಮಾಡಿಕೊಂಡಿದ್ದಾರೆ.

"ಮೊದಲು ಈ ವಿವಾಹಕ್ಕೆ ನಮ್ಮ ವಿರೋಧವಿತ್ತು. ಆದರೆ ಆಸಿಫ್ ಕುಟುಂಬ ಇದೀಗ ಎಲ್ಲ ಷರತ್ತುಗಳಿಗೂ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಒಪ್ಪಿಗೆ ಸೂಚಿಸಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News