×
Ad

ಎಸ್‌ಡಿಪಿಐನಿಂದ ರಾಷ್ಟ್ರೀಯ ಅಭಿಯಾನ

Update: 2017-07-31 17:52 IST

ಬೆಂಗಳೂರು, ಜು.31: ಗೋ ರಕ್ಷಕರ ಗುಂಪುಗಳ ಹಿಂಸಾ ಹತ್ಯೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ‘ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ’ ಎಂಬ ಶೀರ್ಷಿಕೆಯಡಿ ಆ.1 ರಿಂದ 25 ರವರೆಗೆ ರಾಷ್ಟ್ರಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾರ್ಟಿಯ ಕಾರ್ಯದರ್ಶಿ ಅಕ್ರಮ್ ಹಸನ್, ದೇಶದಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ಗೋ ರಕ್ಷಕರು ನಿರ್ಮಾಣ ಮಾಡಿರುವ ಅರಾಜಕತೆಯನ್ನು ಪ್ರತಿರೋಧಿಸಲು ಹಾಗೂ ಭಯದ ವಾತಾವರಣದಿಂದ ಜನರನ್ನು ಹೊರತರುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.

ದೇಶದಲ್ಲಿ ನೂರಾರು ಅಲ್ಪಸಂಖ್ಯಾತ ಹಾಗೂ ದಲಿತ ಕುಟುಂಬಗಳು ಕೋಮುವಾದಿಗಳ ದಾಳಿಯಿಂದ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ. ಸಂಘ ಪರಿವಾರ ಹಾಗೂ ಬಿಜೆಪಿ ಬೆಂಬಲಿತ ಗೋ ರಕ್ಷಕರು ನಡೆಸಿರುವ ಹಿಂಸಾ ಕೃತ್ಯಗಳಿಂದ ಇದುವರೆಗೂ 29 ಮಂದಿ ಅಮಾಯಕ ಜೀವಗಳು ಬಲಿಯಾಗಿದ್ದು, ನೂರಾರು ಜನರು ಗಾಯಗೊಂಡು ದಯನಿಯ ಸ್ಥಿತಿ ತಲುಪಿದ್ದಾರೆ. ದೇಶದಾದ್ಯಂತ ಹಲವಾರು ಗೋ ರಕ್ಷಕರ ಹೆಸರಿನ ದಾಳಿಗಳು ವರದಿಯಾಗುತ್ತಿದ್ದರೂ ಸರಕಾರ ವೌನ ವಹಿಸಿರುವುದು ಖಂಡನೀಯ ಎಂದು ತಿಳಿಸಿದರು.

ಅಮಾಯಕ ಮುಸ್ಲಿಂ ಸಮುದಾಯವನ್ನು ಗುರಿಯಾಸಿಕೊಂಡಿರುವ ಸಂಘ ಪರಿವಾರ ಮತ್ತು ಗೋ ರಕ್ಷಕರು ಅನಗತ್ಯವಾಗಿ ಮುಸ್ಲಿಂಮರ ಮೇಲೆ ಗುಂಪು ದಾಳಿ ನಡೆಸಿ, ಭೀಪ್ ಹೆಸರಿನಲ್ಲಿ ಅವರ ಮೇಲೆ ಹಲ್ಲೆ ಮಾಡುತ್ತಿರುವ ಕೃತ್ಯಗಳು ಹೆಚ್ಚಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಗೋ ರಕ್ಷಕರ ಮೇಲೆ ಕ್ರಮ ಕೈಗೊಳ್ಳುವುದರ ಬದಲಿಗೆ ಜಾರಿಕೆಯ ಹೇಳಿಕೆ ನೀಡುತ್ತಿದ್ದಾರೆ. ಮುಸ್ಲಿಂ ಸಮುದಾಯದ ಹಿತ ಕಾಪಾಡಲು ಅಥವಾ ದೇಶದಲ್ಲಿ ಹೆಚ್ಚಾಗುತ್ತಿರುವ ಗೋ ರಕ್ಷಕರ ಹಿಂಸಾ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಪ್ರಧಾನಿ ಮೋದಿಗೆ ಮನಸ್ಸಿಲ್ಲವೆಂದು ಅವರು ಆರೋಪಿಸಿದರು.

ಈ ನಿಟ್ಟಿನಲ್ಲಿ ಎಸ್‌ಡಿಪಿಐ ವತಿಯಿಂದ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಗುಂಪು ಹಿಂಸಾ ಹತ್ಯೆಯ ವಿರುದ್ಧ ಜನರನ್ನು ಜಾಗೃತಿಗೊಳಿಸಿ ಸಂಘಟಿಸುವ ಮತ್ತು ಪ್ರತಿರೋಧಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಸ್ನೇಹ ಕೂಟ, ವಿಚಾರ ಸಂಕಿರಣ, ರ್ಯಾಲಿ, ಸಾರ್ವಜನಿಕ ಸಭೆಗಳು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಆನ್‌ಲೈನ್ ಮೂಲಕ ದೂರು ಸಲ್ಲಿಕೆ, ಪೋಸ್ಟರ್ ಅಭಿಯಾನ, ಕರಪತ್ರ ವಿತರಣೆ ಮಾಡಲಾಗುತ್ತದೆ.

ಇಂದು ರಾಜಸ್ಥಾನದ ಜೈಪುರದಲ್ಲಿ ಉದ್ಘಾಟನೆಯಾಗಲಿರುವ ಅಭಿಯಾನ ರಾಷ್ಟ್ರದ ಎಲ್ಲ ರಾಜ್ಯಗಳಲ್ಲಿ ಏಕಕಾಲದಲ್ಲಿ ಆರಂಭವಾಗಿ, ಆ.25 ರಂದು ಹಿಂಸಾ ಹತ್ಯೆಗಳು ವಿರೋಧಿಸಿ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹಾಗೂ ಅವರ ನೋವಿನಲ್ಲಿ ನಾವು ಭಾಗಿದಾರರು ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ‘ಮನೆಯಿಂದ ಹೊರಬನ್ನಿ’ ಎಂಬ ಸೂಚನ ಫಲಕ ಪ್ರದರ್ಶಿಸಿ ಕಪ್ಪುಪಟ್ಟಿ ಧರಿಸಿ ರ್ಯಾಲಿ ಮಾಡಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News