×
Ad

ಸರಕಾರ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಒತ್ತು ನೀಡಲಿ: ಟಿ.ಎಂ.ಶಿವಶಂಕರ್ ಸಲಹೆ

Update: 2017-07-31 18:59 IST

ಬೆಂಗಳೂರು,ಜು. 31: ನದಿ ಜೋಡಣೆಯಂತಹ ಬೃಹತ್ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬದಲು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಒತ್ತು ನೀಡಬೇಕು ಎಂದು ಭೂಜಲ ವಿಜ್ಞಾನಿ ಟಿ.ಎಂ.ಶಿವಶಂಕರ್ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಸೋಮವಾರ ಬಸವೇಶ್ವರನಗರ ಹಿರಿಯ ನಾಗರೀಕರ ವೇದಿಕೆಯು ನಗರದಲ್ಲಿ ಆಯೋಜಿಸಿದ್ದ ‘ಬಾಯಾರಿದ ಬೆಂಗಳೂರು ಹಾಗೂ ನೀರಿನ ಬರಕ್ಕೆ ಪರಿಹಾರ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಬೆಂಗಳೂರು ನಗರದಲ್ಲಿ ಪ್ರತಿವರ್ಷ 900 ಮೀ.ಮೀ. ಮಳೆ ಸುರಿಯುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ವ್ಯವಸ್ಥಿತ ಮಳೆ ನೀರು ಕೊಯ್ಲುನಿಂದ ನಗರದ ಜನರು 25 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಆದರೆ ನಗರಕ್ಕೆ 19 ಟಿಎಂಸಿ ಅಡಿ ನೀರನ್ನು ಕಾವೇರಿ ನದಿಯಿಂದ ತರಲು ಕೋಟ್ಯಂತರ ರೂ. ವ್ಯಯಿಸಲಾಗುತ್ತಿದೆೆ ಎಂದರು. ಸರಕಾರದ ಅಂಕಿ ಅಂಶಗಳ ಪ್ರಕಾರ ನಗರದ ಜನಸಂಖ್ಯೆ ಪ್ರತಿವರ್ಷ ಶೇ.16 ರಷ್ಟು ಹೆಚ್ಚುತ್ತಿದೆ. ನಗರದಲ್ಲಿರುವ ಜನಸಂಖ್ಯೆಗೆ ತಲಾ 200 ಲೀ. ನೀರು ನೀಡಬೇಕು. ಆದರೆ, ಇಂದು ಕೇವಲ 50 ಲೀ. ನೀರನ್ನು ಮಾತ್ರ ಪೂರೈಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಲಮಂಡಳಿ ನಗರಕ್ಕೆ ಕುಡಿಯಲು ಪೂರೈಸುವ ನೀರಿನಲ್ಲಿ ಶೇ.10 ಜನ ಮಾತ್ರ ಕುಡಿಯಲು ಬಳಸುತ್ತಿದ್ದಾರೆ. ಪೂರೈಕೆಯಾಗುವ ನೀರಿನಲ್ಲಿ ಶೇ.55 ರಷ್ಟನ್ನು ಉದ್ಯಾನಗಳ ನಿರ್ವಹಣೆಗೆ, ಶೇ.28 ಮನೆ ಬಳಕೆಗೆ, ಶೇ.12 ರಷ್ಟು ಮಾರಾಟಕ್ಕೆ ಶೇ.2 ಕೈಗಾರಿಕೆಗಳಿಗೆ ಬಳಕೆಯಾಗುತ್ತಿದೆ ಎಂದು ತಿಳಿಸಿದರು. ಕೊಳವೆ ಮಾರ್ಗದಲ್ಲಿನ ದೋಷದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತಿದೆ. ನಲ್ಲಿಗಳಲ್ಲಿ ಹನಿಹನಿ ನೀರು ಸೋರಿಕೆಯಿಂದಲೇ ಪ್ರತಿದಿನ 58 ಸಾವಿರ ಲೀಟರ್ ನೀರು ಪೋಲಾಗುತ್ತಿದೆ. ನೀರಿನ ಮಹತ್ವ ಮತ್ತು ನೀರನ್ನು ಮಿತವಾಗಿ ಬಳಸುವ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ನಗರದಲ್ಲಿ ಮಳೆನೀರು ಕೊಯ್ಲು, ಅಂತರ್ಜಲ ಹೆಚ್ಚಳಕ್ಕೆ ಇಂಗುಗುಂಡಿಗಳ ನಿರ್ಮಾಣ ಮತ್ತು ತ್ಯಾಜ್ಯ ನೀರಿನ ಮರುಬಳಕೆಗೆ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News