ಹಿರಿಯರು ಅರಿಶಿನದ ಮಹತ್ವ ಹೇಳುವಾಗ ಮೂಗು ಮುರಿದಿರಾ ?

Update: 2017-08-01 06:01 GMT

ವಾಷಿಂಗ್ಟನ್,ಆ.1 :  ಅರಿಶಿನದ ಜೈವಿಕ ಕ್ರಿಯೆಯ ಅಂಶ (ಬಯೋ ಆಕ್ಟಿವ್ ಕಂಪೋನೆಂಟ್) -ಕುರ್ಕುಮಿನ್ ಇದರ ಇನ್ನೊಂದು ಬಳಕೆಯನ್ನು ಅಮೇರಿಕಾದ ವಿಜ್ಞಾನಿಗಳು ಕಂಡು ಹಿಡಿದಿದ್ದು, ಭಾರತೀಯ ಆಡುಗೆಯಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಅರಿಶಿನ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ಸಹಕಾರಿ ಎಂದು ಅವರು ತಿಳಿಸುತ್ತಾರೆ.

ಕುರ್ಕುಮಿನ್ ನಿಂದ ತುಂಬಿರುವ  ನ್ಯಾನೋ ಪಾರ್ಟಿಕಲ್ಸ್ ನ್ಯೂರೋಬ್ಲಾಸ್ಟೋಮಾ ಟ್ಯೂಮರ್ ಕೋಶಗಳನ್ನು ಗುರಿಯಾಗಿಸಿ ಅವುಗಳನ್ನು ನಾಶಪಡಿಸುವ ಶಕ್ತಿ ಹೊಂದಿವೆ ಎಂದು  ನೆಮೋರ್ಸ್ ಚಿಲ್ಡ್ರನ್ಸ್ ಹಾಸ್ಪಿಟಲ್ ಹಾಗೂ ಯುನಿವರ್ಸಿಟಿ ಆಫ್ ಸೆಂಟ್ರಲ್ ಫ್ಲಾರಿಡಾದ ಸಂಶೋಧಕರು ಕಂಡು ಹಿಡಿದಿದ್ದಾರೆ. ಐದು ವರ್ಷಗಳಿಗಿಂತ ಕೆಳಗಿನ ಹರೆಯದ ಮಕ್ಕಳಲ್ಲಿ ಈ ವಿಧದ ಕ್ಯಾನ್ಸರ್ ಸಾಮಾನ್ಯವಾಗಿ ಕಾಣಿಸುತ್ತದೆ.  ಹೈ ರಿಸ್ಕ್ ನ್ಯೂರೋ ಬ್ಲಾಸ್ಟೋಮಾ ಪೀಡಿತರು ಸಾಮಾನ್ಯವಾಗಿ  ಚಿಕಿತ್ಸೆಗೆ  ಸ್ಪಂದಿಸದೆ ಅವರಲ್ಲಿ ಸಾಯುವವರ ಸಂಖ್ಯೆಯೇ ಹೆಚ್ಚು.

ವಿಜ್ಞಾನ ಪತ್ರಿಕೆ ನ್ಯಾನೋಸ್ಕೇಲ್ ನಲ್ಲಿ ಪ್ರಕಟವಾಗಿರುವ ಈ ಸಂಶೋಧನೆಯ ಮಾಹಿತಿಯಂತೆ  ಕುರ್ಕುಮಿನ್ ನಿಂದ ತಯಾರಿಸಲಾದ ಔಷಧಿ ನ್ಯೂರೋಬ್ಲಾಸ್ಟೋಮಾ ಕಣಗಳನ್ನು ನಾಶಗೊಳಿಸಿ, ಆರೋಗ್ಯಯುತ ಕೋಶಗಳಿಗೆ ಕನಿಷ್ಠ ಹಾನಿಗೈಯ್ಯುತ್ತವೆ.

ಕುರ್ಕುಮಿನ್ ಅನ್ನು ನ್ಯಾನೋ ಪಾರ್ಟಿಕಲ್ಸ್ ಆಗಿ ಪರಿವರ್ತಿಸಿದಾಗ ಅವುಗಳು ಕ್ಷಯರೋಗ ಚಿಕಿತ್ಸೆಗೆ ಸಹಕಾರಿ ಎಂದು ನವದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಂಶೋಧನೆಯೊಂದು ಬಹಿರಂಗ ಪಡಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News