×
Ad

ಅಕ್ರಮ ಸರಕಾರಿ ಜಾಗ ಒತ್ತುವರಿ ಮುಲಾಜಿಲ್ಲದೆ ತೆರವು: ಕೆ.ಜೆ.ಜಾರ್ಜ್

Update: 2017-08-01 18:01 IST

ಬೆಂಗಳೂರು, ಆ.1: ನಗರದಾದ್ಯಂತ ಅಕ್ರಮವಾಗಿ ರಾಜಕಾಲುವೆ, ಕೆರೆ ಪ್ರದೇಶ ಸೇರಿದಂತೆ ಯಾವುದೇ ಸರಕಾರಿ ಜಾಗ ಒತ್ತುವರಿ ಮಾಡಿಕೊಂಡಿರುವುದನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ವರದಿಗಾರರ ಒಕ್ಕೂಟ ಹಾಗೂ ಪ್ರೆಸ್‌ಕ್ಲಬ್ ಸಹಯೋಗದೊಂದಿಗೆ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ಈಗಾಗಲೇ ಗುರುತಿಸಿದ್ದು, ಅದರ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಬಲಿಷ್ಠ ವ್ಯಕ್ತಿಗಳಾಗಿದ್ದರೂ, ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರನ್ನು ರಕ್ಷಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಅಭಿವೃದ್ಧಿಗೆ ಆದ್ಯತೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದಷ್ಟು ಅನುದಾನ ಇದುವರೆಗೂ ಯಾವ ಸರಕಾರವೂ ನೀಡಿಲ್ಲ. ನಗರದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಆನೇಕಲ್‌ಗೆ ಸರಬರಾಜು ಮಾಡಲು 1800 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅನುಮತಿ ದೊರೆಯಬೇಕಾಗಿದೆ. ನಗರದಲ್ಲಿ ಉತ್ಪಾದನೆಯಾಗುತ್ತಿರುವ ತ್ಯಾಜ್ಯ ವಿಲೇವಾರಿ ಮಾಡಲು ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ, ಶೇ.100 ರಷ್ಟು ಪೂರ್ಣಗೊಳಿಸಲು ಆಗುತ್ತಿಲ್ಲ. ಈವರೆಗೂ ತ್ಯಾಜ್ಯ ಸಂಸ್ಕರಣೆ ಮಾಡಿ ಅದನ್ನು ಕಾಂಪೋಸ್ಟ್ ತಯಾರಿಸಿ ರೈತರಿಗೆ ಅತಿ ಕಡಿಮೆ ಬೆಲೆಗೆ ಹಾಗೂ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದರು.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ: ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಯಶವಂತಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಲಹಂಕ ಹೊಸ ಮಾರ್ಗದಲ್ಲಿ ನೇರವಾಗಿ ರೈಲು ಸಂಚರಿಸಲು ಚಿಂತನೆ ನಡೆದಿದೆ. ಅದೇ ರೀತಿ ಯಶವಂತಪುರದಿಂದ ನೇರವಾಗಿ ಏರ್‌ಪೋರ್ಟ್‌ಗೆ ರೈಲು ಸಂಪರ್ಕ ಕಲ್ಪಿಸುವ ಹೊಸ ಮಾರ್ಗ ನಿರ್ಮಿಸುವ ಉದ್ದೇಶವಿದೆ. ಈಗಾಗಲೇ ಯಲಹಂಕ ಸುತ್ತಮುತ್ತಲಿನ ಭಾಗಗಳಲ್ಲಿ ಭೂಸ್ವಾಧೀನ ಸಮಸ್ಯೆ ಎದುರಾಗುವುದರಿಂದ ಎಲಿವೇಟೆಡ್ ಮಾರ್ಗ ಅಥವಾ ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಕುರಿತಂತೆ ರೈಟ್ಸ್ ಸಂಸ್ಥೆ ಸಾಧ್ಯತಾ ವರದಿ ನೀಡಲಿದ್ದು, ಸಾಧ್ಯತಾ ವರದಿಯ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ. ವರದಿ ನೀಡಿದ ನಂತರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಶೀಘ್ರದಲ್ಲಿಯೇ ರೈಲ್ವೆ ಸಚಿವರು ಹಾಗೂ ರೈಲ್ವೆ ಮಂಡಳಿಯೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಈಗಾಗಲೇ ರಾಮನಗರ-ನಾಯಂಡಹಳ್ಳಿ, ತುಮಕೂರು-ಯಶವಂತಪುರ, ವೈಟ್‌ಫೀಲ್ಡ್ -ಬೈಯಪ್ಪನಹಳ್ಳಿ ರೈಲು ನಿಲ್ದಾ ಸಬ್ ಅರ್ಬನ್ ರೈಲು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಮೆಟ್ರೊ ಮೊದಲ ಹಂತ ಪೂರ್ಣಗೊಳಿಸಿದ್ದು, ಏರ್‌ಪೋರ್ಟ್ ಮೆಟ್ರೊ ರೈಲು ಸಂಪರ್ಕ ಕಲ್ಪಿಸಲು ಸರಕಾರ ಅನುಮೋದನೆ ನೀಡಿದ್ದು, ಡಿಪಿಆರ್ ತಯಾರಿಸಿ ಶೀಘ್ರದಲ್ಲಿ ಕೇಂದ್ರಕ್ಕೆ ಸಲ್ಲಿಸಲಾಗುವುದು. ಮೆಟ್ರೊ 2ನೇ ಹಂತದಲ್ಲಿ ಮೆಟ್ರೊ ರೈಲು ನಿಲ್ದಾಣ ನಿರ್ಮಿಸಲು ಸಾರ್ವಜನಿಕ-ಸಹಭಾಗಿತ್ವ ಯೋಜನೆ (ಪಿಪಿಪಿ) ಅಡಿಯಲ್ಲಿ ಮುಂದಾಗಿದ್ದು, ಈಗಾಗಲೇ ಖಾಸಗಿ ಕಂಪೆನಿಗಳು ಹಣಕಾಸು ನೆರವು ನೀಡಿವೆ ಎಂದರು.

 ಉಕ್ಕಿನ ಸೇತುವೆ ನಮ್ಮದಲ್ಲ: ಚಾಲುಕ್ಯ ವೃತ್ತದಿಂದ-ಹೆಬ್ಬಾಳದವರೆಗೂ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆ ಯೋಜನೆ ನಮ್ಮ ಪರಿಕಲ್ಪನೆಯಲ್ಲ. ಇದು ಹಿಂದಿನ ಸರಕಾರದಲ್ಲಿದ್ದಾಗ ತಜ್ಞರ ಸಮಿತಿ ಈ ಪ್ರಸ್ತಾಪ ಇಟ್ಟಿತ್ತು. ಪ್ರಸ್ತುತ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಆಧಾರ ರಹಿತ ಆರೋಪ ಸಲ್ಲ: ಉಕ್ಕಿನ ಸೇತುವೆ, ಇಂದಿರಾ ಕ್ಯಾಂಟಿನ್ ಯೋಜನೆ ಸಂಬಂಧಿಸಿದಂತೆ ವಿರೋಧ ಪಕ್ಷವು ಆಧಾರ ಸಹಿತವಾಗಿ ಆರೋಪ ಮಾಡಲಿ. ಅದು ಬಿಟ್ಟು, ಸರಿಯಾದ ದಾಖಲೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ . ಇತ್ತೀಚೆಗೆ ಇಂದಿರಾ ಕ್ಯಾಂಟಿನ್ ಯೋಜನೆಗೆ ಸಂಬಂಧಿಸಿದಂತೆ 65 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

‘ನಗರದ ಅಭಿವೃದ್ಧಿ ಹಿತದೃಷ್ಟಿಯಿಂದ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬಿಎಂಆರ್‌ಡಿಎ, ಮೆಟ್ರೋ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಹಮ್ಮಿಕೊಳ್ಳುವ ಯೋಜನೆ ಹಾಗೂ ಮಾಹಿತಿ ಸಾರ್ವಜನಿಕರಿಗೆ ತಲುಪಿಸುವ ಸಲುವಾಗಿ ನಗರಾಭಿವೃದ್ಧಿ ಇಲಾಖೆಯಿಂದ ಶೀಘ್ರವೇ ಸಾಮಾಜಿಕ ಜಾಲತಾಣ ಮಾಧ್ಯಮ ಆರಂಭಿಸಲು ಸಿದ್ಧತೆ ನಡೆಸಲಾಗಿದೆ’ - ಕೆ.ಜೆ.ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ

ನಗರದ ವಿವಿಧ ಕಡೆಗಳಲ್ಲಿ ಅಕ್ರಮ ಜಾಹೀರಾತು ಫಲಕ, ಭಿತ್ತಿಪತ್ರ ಅಂಟಿಸುತ್ತಾರೋ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚನೆ ನೀಡಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಎಲ್ಲರಿಗೂ ಮುಕ್ತ ಸ್ವಾತಂತ್ರ ನೀಡಿದ್ದೇವೆ. ನಾನು ಎಂದೂ ಅಧಿಕಾರದ ಆಸೆಗೆ ರಾಜಕಿಯ ಪ್ರವೇಶ ಮಾಡಿಲ್ಲ. ಇದುವರೆಗೂ ಹಲವಾರು ಖಾತೆಗಳನ್ನು ನಿರ್ವಹಿಸಿದ್ದೇನೆ. ಈಗ ಕೊಟ್ಟಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ.
-ಕೆ.ಜೆ.ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News