×
Ad

ಎಫ್‌ಡಿಎ ಹುದ್ದೆಗೆ ವಿದ್ಯಾರ್ಥಿನಿ ಲಿಷಾ ನೇಮಕ

Update: 2017-08-01 20:06 IST

ಬೆಂಗಳೂರು, ಜು.1: ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಎನ್.ಎಸ್.ಲಿಷಾ ಅವರಿಗೆ ರಾಜ್ಯ ಗೃಹ ರಕ್ಷಕ ಮತ್ತು ಪೌರರಕ್ಷಣಾ ಕೇಂದ್ರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕಿ(ಎಫ್‌ಡಿಎ) ಹುದ್ದೆಗೆ ನೇಮಕ ಮಾಡಿರುವ ಆದೇಶವನ್ನು ರಾಜ್ಯ ಸರಕಾರ ಹೈಕೋರ್ಟ್‌ಗೆ ಸಲ್ಲಿಸಿತು.
          
ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದ ಹೊರತಾಗಿಯೂ ತನಗೆ ಉದ್ಯೋಗ ಕಲ್ಪಿಸಲು ರಾಜ್ಯ ಸರಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಲಿಷಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಪಟೇಲ್ ಮತ್ತು ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ಪೀಠಕ್ಕೆ ಸರಕಾರಿ ವಕೀಲರು ಲಿಷಾರ ನೇಮಕಾತಿ ಆದೇಶದ ಪ್ರತಿ ಸಲ್ಲಿಸಿದರು. ಆದೇಶ ಪ್ರತಿ ಸ್ವೀಕರಿಸಿದ ನ್ಯಾಯಪೀಠ, ಏಕಸದಸ್ಯ ಪೀಠ ಆದೇಶದಂತೆ ರಾಜ್ಯ ಸರಕಾರವು ಲಿಷಾಗೆ ಸರಕಾರಿ ನೌಕರಿ ನೀಡಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ತಿಳಿಸಿತು. ಬಳಿಕ ಅರ್ಜಿ ಇತ್ಯರ್ಥಪಡಿಸಿ, ಗೃಹ ಇಲಾಖೆ ಮೇಲಿನ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈ ಬಿಟ್ಟಿತು.

ಲಿಷಾರನ್ನು ಗೃಹ ರಕ್ಷಕ ಮತ್ತು ಪೌರ ರಕ್ಷಣಾ ಇಲಾಖೆ ಕೇಂದ್ರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕಿ ಹುದ್ದೆಗೆ ನೇಮಿಸಲಾಗಿದೆ. ಅಭ್ಯರ್ಥಿಯ ವೈದ್ಯಕೀಯ ಅರ್ಹತೆಯಂತೆ ಈ ನೇಮಕಾತಿ ಸೂಕ್ತವಾಗಿದೆ. ಆದೇಶ ಹೊರಡಿಸಿದ ದಿನದಿಂದ 15 ದಿನಗಳೊಳಗೆ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗಬೇಕು. ತಪ್ಪಿದರೆ ನೇಮಕಾತಿ ಆದೇಶ ರದ್ದಾಗುತ್ತದೆ. ಎರಡು ವರ್ಷ ಪರೀಕ್ಷಾ ಅವಧಿಯಾಗಿದೆ ಎಂದು ಗೃಹ ರಕ್ಷಕದಳ ಮತ್ತು ಪೌರರಕ್ಷಣಾ ಇಲಾಖೆ ಮಹಾನಿರ್ದೇಶಕರು ಜುಲೈ 25ರಂದು ಹೊರಡಿಸಿದ ನೇಮಕಾತಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

2013ರ ಎ.17ರಂದು ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಲಿಷಾ ಗಾಯಗೊಂಡು ಶೇ.50ರಿಂದ 70ರಷ್ಟು ಅಂಗವೈಕಲ್ಯಕ್ಕೆ ಗುರಿಯಾದರು. ಇದರಿಂದ ತನ್ನನ್ನು ಭಯೋತ್ಪಾದನಾ ಕೃತ್ಯದ ಸಂತ್ರಸ್ಥೆಯಾಗಿ ಪರಿಗಣಿಸಿ ಸರಕಾರಿ ಉದ್ಯೋಗ ಕಲ್ಪಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸರಕಾರ ಪರಿಗಣಿಸದ್ದಕ್ಕೆ ಲಿಷಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಲಿಷಾಗೆ ಮೂರು ತಿಂಗಳಲ್ಲಿ ಸರಕಾರಿ ಉದ್ಯೋಗ ಕಲ್ಪಿಸುವಂತೆ 2016ರ ಅ.17ರಂದು ಹೈಕೋರ್ಟ್ ಏಕಸದಸ್ಯ ಪೀಠ ಹೊರಡಿಸಿದ ಆದೇಶವನ್ನೂ ಸರಕಾರ ಪಾಲಿಸದ ಹಿನ್ನೆಲೆಯಲ್ಲಿ ಲಿಷಾ ರಾಜ್ಯ ಗೃಹ ಸಚಿವಾಲಯದ ಕಾರ್ಯದರ್ಶಿ ವಿರುದ್ಧ ವಿಭಾಗೀಯ ಪೀಠಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News